ಮುಂಬಯಿ:
ಒಂದು ಕಾಲದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ‘ದೈತ್ಯ ಶಕ್ತಿ’ಯಾಗಿ ಜಾಗತಿಕ ಕ್ರಿಕೆಟ್ನ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ವೆಸ್ಟ್ ಇಂಡೀಸ್ ತಂಡ ಈಗ ತಳ ಕಾಣುತ್ತಿದೆ. ಹಲವು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಹುಟ್ಟುಹಾಕಿದ್ದ ಕೆರೀಬಿಯನ್ ನಾಡಿನ ಕ್ರಿಕೆಟ್ ಅವನತಿಯತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಈ ಬಗ್ಗೆ ಮಾಜಿ ಆಟಗಾರ ಬ್ರಿಯನ್ ಲಾರಾ ಬೇಸರ ವ್ಯಕ್ತಪಡಿಸಿದ್ದು ಆಟಗಾರರು ಕ್ರಿಕೆಟ್ ಪ್ರೀತಿ ಹೊಂದಿದರೆ ಮಾತ್ರ ವಿಂಡೀಸ್ ತಂಡ ಉಳಿಯಬಹುದು ಎಂದು ಹೇಳಿದ್ದಾರೆ.
ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿಜೀವಮಾನ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಲಾರಾ, ಹಣಕಾಸಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆ, ಪ್ರತಿಭೆಗಳ ಅಲಭ್ಯತೆ, ಇವೇನೇ ಇರಲಿ, ವೆಸ್ಟ್ ಇಂಡೀಸ್ ಆಟಗಾರಿಗೆ ಕ್ರಿಕೆಟ್ ಬಗ್ಗೆ ಹೃದಯದಲ್ಲಿ ನಿಜವಾದ ಪ್ರೀತಿ ಉಳಿದಿದ್ದರೆ, ಆ ತಂಡವು ಈಗ ಎದುರಿಸುವ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗ ಕಂಡುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು 17 ವರ್ಷಗಳ ಕಾಲ ವೃತ್ತಿಜೀವನದಲ್ಲಿ ಟೆಸ್ಟ್ ಕ್ರಿಕೆಟನ್ನು ಇಷ್ಟಪಟ್ಟು ಆಡಿದೆ. 40–45 ವರ್ಷಗಳ ಹಿಂದೆ ವಿವ್ ರಿಚರ್ಡ್ಸ್ ಮೊದಲಾದವರು ಆಡುವಾಗ ಈಗಿನಷ್ಟೂ ಸೌಲಭ್ಯಗಳಿರಲಿಲ್ಲ. ಪ್ರಾಕ್ಟೀಸ್ ಪಿಚ್ಗಳಿರಲಿಲ್ಲ. ಆದರೆ ಅವರು ಕ್ರಿಕೆಟ್ ಮೇಲಿನ ಪ್ರೀತಿಯಿಂದ ಆಡಿ ದಿಗ್ಗಜರಾದರು ಎಂದು ಲಾರಾ ಹೇಳಿದರು.
“ನಾನು ರೋಸ್ಟನ್ ಚೇಸ್ ಮತ್ತು ಇತರ ಆಟಗಾರರನ್ನು ಕಳಕಳಿಯಿಂದ ಕೇಳುವೆ, ನಿಮ್ಮ ಹೃದಯದಲ್ಲಿ ಕ್ರಿಕೆಟ್ಗೆ ಸ್ಥಾನ ಇದೆಯೇ? ವೆಸ್ಟ್ ಇಂಡೀಸ್ಗೆ ಆಡಲು ನೀವು ಪ್ರಾಮಾಣಿಕವಾಗಿ ಬಯಸುತ್ತಿರುವಿರಾ?. ನಿಮ್ಮಲ್ಲಿ ಆ ಪ್ರೀತಿ, ಕಾಳಜಿಯಿದ್ದರೆ ನೀವು ಖಂಡಿತಕ್ಕೂ ದುರವಸ್ಥೆಯಿಂದ ಹೊರಬರುವ ದಾರಿ ಕಂಡುಕೊಳ್ಳುವಿರಿ’ ಎಂದು ಲಾರಾ ಹೇಳಿದರು.
