ಸುಮ್ಮನೆ ಲಾಠಿ ಚಾರ್ಜ್ ಮಾಡಿಲ್ಲ, ಪೊಲೀಸರ ಬಳಿ ಹಿಂಸಾಚಾರದ ವಿಡಿಯೋಗಳಿವೆ- ಪರಮೇಶ್ವರ್

ಬೆಳಗಾವಿ: 

  ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಬಸವಜಯ ಮೃತ್ಯಂಜಯಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

   ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಎಲ್ಲಾ ರೀತಿಯ ಅವಕಾಶ ಕಲ್ಪಿಸಲಾಗಿತ್ತು. ಆದರೆ ಹೋರಾಟಗಾರರು ಕಾನೂನು ಮತ್ತು ಸುವ್ಯವಸ್ಥಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರು. ಆದೇಶಗಳನ್ನು ಉಲ್ಲಂಘಿಸಿ ಸುವರ್ಣ ವಿಧನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕಾರಣ ಲಘು ಲಾಠಿ ಪ್ರಹಾರ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ಮುಂಜಾಗ್ರತಾ ಬಂಧನ ಮಾತ್ರ ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

   ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಎಲ್ಲವೂ ಸ್ಪಷ್ಟವಾಗಿದೆ, ಸರ್ಕಾರವು ಘಟನೆಯ ಬಗ್ಗೆ ತನಿಖೆ ನಡೆಸುವುದಿಲ್ಲ ಅಥವಾ ಇದರಲ್ಲಿ ಹೇಳಿದ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದರು. ಪೊಲೀಸ್ ಲಾಠಿಚಾರ್ಜ್ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಹಿಂಸಾಚಾರದ ವಿಡಿಯೋಗಳು ಮತ್ತು ಫೋಟೋಗಳು ಮತ್ತು ಹಿಂಸಾಚಾರದ ವೇಳೆ ಕಲ್ಲು ತೂರಾಟ ನಡೆಸಿದವರ ಗುರುತು ಪೊಲೀಸರ ಬಳಿ ಇರುವುದರಿಂದ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದರು.

   ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಕಲ್ಲು ತೂರಾಟದಲ್ಲಿ ಕನಿಷ್ಠ 25 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಲಾಠಿಚಾರ್ಜ್‌ ಅನಗತ್ಯ ಎಂದಿದ್ದು, ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಪಂಚಮಸಾಲಿಗಳಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಹಿಂಸಾಚಾರದ ಸಂದರ್ಭದಲ್ಲಿ ಎಡಿಜಿಪಿ ಸೇರಿದಂತೆ ಕೆಲವು ಉನ್ನತ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರು ಮತ್ತು ಅನಗತ್ಯವಾಗಿ ಲಾಠಿಚಾರ್ಜ್‌ಗೆ ಆದೇಶಿಸಿದ್ದಾರೆ ಎಂದು ಅವರು ಹೇಳಿದರು.

   ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಕೂಡ ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಆಂದೋಲನ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಕಾಂಗ್ರೆಸ್ ಸದಸ್ಯ ವಿಜಯಾನಂದ ಕಾಶಪ್ಪನವರ್ ಪೊಲೀಸರ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದರಾದರೂ, ಪ್ರತಿಭಟನಾಕಾರರ ಮೇಲೆ ಪೊಲೀಸರ ಕ್ರಮಕ್ಕೆ ಬಿಜೆಪಿ ಮುಖಂಡರೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಮಂಗಳವಾರದ ಪ್ರತಿಭಟನೆಯು ಬಿಜೆಪಿ ಪ್ರಾಯೋಜಿತವಾಗಿದೆ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮುದಾಯವನ್ನು ದಾರಿ ತಪ್ಪಿಸುತ್ತಿವೆ , ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರಕ್ಕೆ ಆರ್‌ಎಸ್‌ಎಸ್‌ಗೆ ಸೇರಿದ ಸದಸ್ಯರೇ ಕಾರಣ ಎಂದು ಅವರು ಆರೋಪಿಸಿದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಆರೆಸ್ಸೆಸ್ ಕುರಿತು ಕಾಂಗ್ರೆಸ್ ಸದಸ್ಯರು ಮಾಡಿರುವ ಟೀಕೆಯನ್ನು ತೆಗೆದುಹಾಕುವಂತೆ ಸ್ಪೀಕರ್‌ಗೆ ಒತ್ತಾಯಿಸಿದರು. ಆದರೆ, ಕಾಂಗ್ರೆಸ್ ಸಚಿವರು ಹಾಗೂ ಸದಸ್ಯರು ಕಾಶಪ್ಪನವರ್ ಹೇಳಿದ್ದನ್ನು ಸಮರ್ಥಿಸಿಕೊಂಡರು.

   ಬಿಜೆಪಿ ಸರಕಾರ ಸಲ್ಲಿಸಿರುವ ಅಫಿಡವಿಟ್ ನಿಂದಾಗಿ ಸಮುದಾಯದವರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಹಾಗಾಗಿ ರಾಜ್ಯ ಸರ್ಕಾರ ಪಂಚಮಸಾಲಿ ಸದಸ್ಯರ ಬೇಡಿಕೆಗೆ ಯಾವುದೇ ಕ್ರಮ ಕೈಗೊಳ್ಳಲಾಗದ ಅಸಹಾಯಕ ಪರಿಸ್ಥಿತಿಯಲ್ಲಿತ್ತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವರ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗೃಹ ಸಚಿವರ ಹೇಳಿಕೆ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದೆಯೇ ಹೊರತು 2ಎ ವರ್ಗದ ಮೀಸಲಾತಿಯ ಬೇಡಿಕೆಯ ಬಗ್ಗೆ ಅಲ್ಲ ಎಂದು ಹೇಳಿದರು.

   ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಪ್ರಶ್ನೆ ಎತ್ತಿದರೂ ಸಭಾಧ್ಯಕ್ಷರು ಅದನ್ನು ಪರಿಗಣಿಸದೆ ಬೈರೇಗೌಡರಿಗೆ ಮಾತನಾಡಲು ಅವಕಾಶ ನೀಡಿದರು. ಗದ್ದಲ ಮುಂದುವರಿದಿದ್ದರಿಂದ ಸ್ಪೀಕರ್ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು. ಹೊರಗೆ ಬರುತ್ತಿದ್ದಾಗ ಬಿಜೆಪಿ ಸದಸ್ಯರು ಸಭಾಧ್ಯಕ್ಷರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ಕೊಠಡಿಗೆ ತೆರಳಿ ಪ್ರತಿಭಟನೆ ನಡೆಸಿದರು. ಊಟದ ನಂತರ ಮತ್ತೆ ಆರಂಭವಾದಾಗ ಯತ್ನಾಳ್ ಅವರು ಪಂಚಮಸಾಲಿ ಪ್ರತಿಭಟನಾಕಾರರ ಮೇಲೆ ವಿನಾಕಾರಣ ಲಾಠಿಚಾರ್ಜ್‌ಗೆ ಆದೇಶಿಸಿದ ಎಡಿಜಿಪಿ ಆರ್.ಹಿತೇಂದ್ರ ಅವರಿಗೆ ಈಗಿನ ಸರ್ಕಾರ ರಕ್ಷಣೆ ನೀಡಬಹುದು, ಆದರೆ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಪರೋಕ್ಷವಾಗಿ ಎಚ್ಚರಿಸಿದಾಗ ಸದನ ಗದ್ದಲಕ್ಕೆ ಸಾಕ್ಷಿಯಾಯಿತು. ಎಡಿಜಿಪಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡುವುದಾಗಿ ಬಿಜೆಪಿ ಶಾಸಕರು ಹೇಳಿದಾಗ, ಒಕ್ಕೂಟ ರಚನೆ ಮತ್ತು ಸಂವಿಧಾನವನ್ನು ಉಲ್ಲೇಖಿಸಿ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಪ್ರತ್ಯಾರೋಪ ಮಾಡಿದರು.

Recent Articles

spot_img

Related Stories

Share via
Copy link