ಬೆಂಗಳೂರು
ಕಾವೇರಿ, ಕೃಷ್ಣಾ ಹಾಗೂ ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ನ್ಯಾಯ ಮಂಡಳಿಗಳ ಮುಂದೆ ವಾದ ಮಂಡನೆಗಾಗಿ ರಾಜ್ಯ ಸರ್ಕಾರವು ರೂ.122 ಕೋಟಿಗೂ ಅಧಿಕ ಮೊತ್ತವನ್ನು ಹಿರಿಯ, ಕಿರಿಯ ವಕೀಲರು ಹಾಗೂ ಅಡ್ವೊಕೇಟ್ ಜನರಲ್‌ಗಳಿಗೆ ಶುಲ್ಕದ ರೂಪದಲ್ಲಿ ಪಾವತಿಸಿದೆ ಎಂಬ ಅಂಶ ಮಾಹಿತಿ ಹಕ್ಕು ದಾಖಲೆಗಳಿಂದ ತಿಳಿದು ಬಂದಿದೆ. ಈ ಪೈಕಿ ಐವರು ಹಿರಿಯ ವಕೀಲರಿಗೆ ರೂ.87 ಕೋಟಿಗೂ ಅಧಿಕ ಹಣವನ್ನು ಶುಲ್ಕವನ್ನಾಗಿ ಪಾವತಿಸಿರುವುದಾಗಿ ತಿಳಿದುಬಂದಿದೆ.
ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಜಲ ವಿವಾದ ನ್ಯಾಯ ಮಂಡಳಿಯಲ್ಲಿನ ವಾದ ಮಂಡನೆಗಾಗಿ ರೂ.122,75,95,882 ರೂಪಾಯಿಗಳನ್ನು 41 ವಕೀಲರಿಗೆ ಶುಲ್ಕದ ರೂಪದಲ್ಲಿ ಪಾವತಿಸಲಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮಾಹಿತಿ ಹಕ್ಕು ಕಾರ್ಯಕರ್ತ ಬೆಳಗಾವಿಯ ಭೀಮಪ್ಪ ಗಡಾದ ಅವರಿಗೆ ದಾಖಲೆ ಸಮೇತ ವಿವರ ಒದಗಿಸಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ ನಡುವಿನ ಕಾವೇರಿ ನೀರು ಹಂಚಿಕೆ ವಿವಾದವು 1990ರ ಜೂನ್ 2ರಿಂದ ನ್ಯಾಯ ಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. 1990ರ ಜೂನ್ 2ರಿಂದ 2017ರ ಜುಲೈ 10ರವರೆಗಿನ ಲಭ್ಯ ಮಾಹಿತಿಯ ಪ್ರಕಾರ ವಕೀಲರಿಗೆ ರೂ.54,13,21,282 ರೂಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಲಾಗಿದೆ. ಒಟ್ಟು 580 ಬಾರಿ ವಿಚಾರಣೆಗಳು (ಸಿಟಿಂಗ್) ನಡೆದಿವೆ.
