ಚಿಕ್ಕಬಳ್ಳಾಪುರ:
ಡಾ.ಕೆ.ಸುಧಾಕರ್ ನನಗೆ ಮಾಹಿತಿ ನೀಡದೆ ಮನೆಗೆ ಬಂದಿದ್ದರು. ಆದರೆ. ಮಾಧ್ಯಮಗಳ ಮುಂದೆ ನಾನು ಭೇಟಿಗೆ ಸಿಗಲಿಲ್ಲ ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ತಂತ್ರಗಳನ್ನು ಬಳಸಿದ್ದಾರೆ. ಈ ತಂತ್ರಗಳು ಅವರಿಗೇ ಸಂಕಷ್ಟವನ್ನು ಎದುರು ಮಾಡಲಿದ್ದು, ಕೂಡಲೇ ಈ ತಂತ್ರಗಳನ್ನು ನಿಲ್ಲಿಸಬೇಕೆಂದು ಎಸ್‌ಆರ್ ವಿಶ್ವನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸುಧಾಕರ್ ಅವರು, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ನಮ್ಮ ಸ್ನೇಹಿತರು. ಹಲವಾರು ಸಲ ನಾನು ಕರೆ ಮಾಡಿದ್ದೆ, ಮೆಸೇಜ್ ಮಾಡಿದ್ದೆ. ಅದಕ್ಕೆ ಯಾವುದೇ ಉತ್ತರ ಇಲ್ಲ. ಯಾವುದಕ್ಕೂ ಸ್ಪಂದಿಸಿರಲಿಲ್ಲ. ನಮ್ಮ ನಾಯಕರು ಯಡಿಯೂರಪ್ಪ ಅವರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ
ಇದೇ ಚುನಾವಣೆ ಕೊನೆಯಲ್ಲ. ನಮ್ಮ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ. ಇದರ ನಡುವೆ ನಮ್ಮ ಅವರ ಭೇಟಿ ಸಾಧ್ಯವಾಗಿಲ್ಲ. ಕೆಲವು ರಾಜಕಾರಣದಲ್ಲಿ ಎಲ್ಲವು ಸರಾಗವಾಗಿ ನಡೆದರೆ ಅದು ರಾಜಕಾರಣವಲ್ಲ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ನನ್ನ ಮತ್ತು ಅವರ ನಡುವೆ ವೈಯಕ್ತಿಕ ಕಲಹಗಳು ಏನು ಇಲ್ಲ. ನಾನು ಸೇರಿ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರೋದು. ಏ.4ರಂದು ನಾಮಪತ್ರ ಸಲ್ಲಿಸುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಅಧಿಕೃತ ನಾಮಪತ್ರ ಸಲ್ಲಿಸುತ್ತೇನೆ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್ ಅವರು, ಇಂತಹ ಗಿಮಿಕ್ ಗಳ ಮೂಲಕ ಸುಧಾಕರ್ ಅವರು ಚುನಾವಣೆಯಲ್ಲಿ ಮತ್ತಷ್ಟು ಕಷ್ಟಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಐದು ದಿನಗಳ ಹಿಂದೆ ಸಂದೇಶ ಕಳುಹಿಸಿದ್ದ ಸುಧಾಕರ್, ನನ್ನನ್ನು ಭೇಟಿಯಾಗಬೇಕೆಂದು ಹೇಳಿದ್ದರು. ಆದರೆ, ಮನೆಗೆ ಬರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ನಾನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಮನೆಗೆ ಬಂದು ನಾನು ಭೇಟಿಗೆ ಸಿಕ್ಕಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳುವ ತಂತ್ರ ಹೂಡಿದ್ದಾರೆಂದು ಕಿಡಿಕಾರಿದ್ದಾರೆ.
ಅಸಮಾಧಾನವಿದ್ದದ್ದು ನಿಜ. ನನ್ನ ಮಗ ಅಲೋಕ್‌ಗೆ ಟಿಕೆಟ್ ಸಿಗಲಿಲ್ಲ ಎಂದು 2-3 ದಿನಗಳಿಂದ ನಾನು ಸಹಜವಾಗಿಯೇ ಅಸಮಾಧಾನಗೊಂಡಿದ್ದೆ. ಈಗ ಆ ಅಸಮಾಧಾನವಿಲ್ಲ. ಕಳೆದ ಬಾರಿ ಬಿಎನ್ ಬಚ್ಚೇಗೌಡರ ಪರ ಅನುಕಂಪವಿತ್ತು. ಆ ವೇಳೆ ಮೋದಿ ಅಲೆ ಇತ್ತು. ಹೀಗಾಗ ಬಚ್ಚೇಗೌಡ ಪರ ಒಕ್ಕಲಿಗರು ಮತ ಹಾಕಿದರು. ವೀರಪ್ಪ ಮೊಯ್ಲಿ ದುರ್ಬಲ ಅಭ್ಯರ್ಥಿ ಎಂಬ ಕಾರಣಕ್ಕೆ ಬಲಿಜಿಗ ಸಮುದಾಯದ ಒಂದು ವರ್ಗ ಬಚ್ಚೇಗೌಡ ಅವರಿಗೆ ಮತ ಹಾಕಿತ್ತು. 2019 ರಲ್ಲಿ ಯಲಹಂಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ 75,000 ಮತಗಳ ಮುನ್ನಡೆ ಸಿಕ್ಕಿತ್ತು.
ಈ ಬಾರಿ ಇಬ್ಬರೂ ಅಭ್ಯರ್ಥಿಗಳು (ಸುಧಾಕರ್ ಮತ್ತು ಕಾಂಗ್ರೆಸ್‌ನ ರಕ್ಷಾ ರಾಮಯ್ಯ) ಸಮಾನರು. ಮೊಯ್ಲಿ ಆಗಿದ್ದರೆ ನಾವು ಸುಲಭವಾಗಿ ಗೆಲ್ಲುತ್ತಿದ್ದೆವು. ನಾವು ರಕ್ಷಾ ರಾಮಯ್ಯ ಅವರನ್ನು ಸಾಮಾನ್ಯ ಎಂಬಂತೆ ನೋಡಲು ಸಾಧ್ಯವಿಲ್ಲ. ಅತಿಯಾದ ಆತ್ಮವಿಶ್ವಾಸದಿಂದ ಇರಲು ಸಾಧ್ಯವಿಲ್ಲ, ಸುಧಾಕರ್ ಹೆಸರಿನಲ್ಲಿ ಮತ ಕೇಳಲು ಸಾಧ್ಯವಿಲ್ಲ. ಆರೀತಿ ಮಾಡಿದರೆ ಸೋಲು ಕಾಣುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಹೀಗಾಗ ಮೋದಿಯವರ ಹೆಸರಿನ ಮೂಲಕ ಲಭಾ ಗಳಿಸಬಹುದು ಎಂದು ತಿಳಿಸಿದ್ದಾರೆ.