ಲೀಲಾವತಿ ಅಪರೂಪದ ನೈಜ ನಟನೆಯ ಕಲಾವಿದೆ : ಸಿಎಂ

ಬೆಂಗಳೂರು: 

    ಹಿರಿಯ ನಟಿ ಲೀಲಾವತಿಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಸೋಲದೇವನಹಳ್ಳಿಯ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದೆ. ಆಗ ಅವರ ಪುತ್ರ ಅಲ್ಲಿದ್ದರು. ಅವರ ಮಗ ವಿನೋದ್ ನಲ್ಲಿ ತಾಯಿಯನ್ನು ಕೊನೆಕಾಲದಲ್ಲಿ ಚೆನ್ನಾಗಿ ನೋಡಿಕೋ ಎಂದು ಹೇಳಿ ಬಂದಿದ್ದೆ. ತಾಯಿ-ಮಗನ ಬಾಂಧವ್ಯ ಅನ್ಯೋನ್ಯವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

    ಇಂದು ಲೀಲಾವತಿಯವರ ಅಂತ್ಯಸಂಸ್ಕಾರಕ್ಕೆ ಮುನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನ ಪಡೆದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇವತ್ತು ಲೀಲಾವತಿಯವರಿಗೆ ಸರ್ಕಾರದ ಎಲ್ಲಾ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲು ನಾನು ಆದೇಶ ನೀಡಿದ್ದೇನೆ. ಅವರು ಕರ್ನಾಟಕ ಚಲನಚಿತ್ರ ಕಂಡ ಅಪರೂಪದ ನೈಜ ನಟನೆಯ ಕಲಾವಿದೆ. ರಂಗಭೂಮಿಯಿಂದ ಸಿನಿಮಾರಂಗಕ್ಕೆ ಬಂದು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಮಾಡಿದ್ದಾರೆ.

    ಅವರು ಬಹುಭಾಷೆ ಕಲಾವಿದೆ, ಯಾವುದೇ ಪಾತ್ರವಿರಲಿ ಅದಕ್ಕೆ ಜೀವ ತುಂಬುತ್ತಿದ್ದರು, ಅದು ನಾಯಕಿ, ತಾಯಿ ಪಾತ್ರ, ಅತ್ತೆ, ಅಜ್ಜಿ ಪಾತ್ರ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಮತ್ತು ಸಾಮಾಜಿಕ, ಕೌಟುಂಬಿಕ, ಪೌರಾಣಿಕ ಚಿತ್ರಗಳ ಪಾತ್ರಗಳಲ್ಲಿ ಮನೋಜ್ಞವಾಗಿ ನಟನೆ ಮಾಡುತ್ತಿದ್ದರು. ನಾನು ಕಾಲೇಜು ವಿದ್ಯಾರ್ಥಿ ದೆಸೆಯಿಂದ ಅವರ ಚಲನಚಿತ್ರಗಳನ್ನು ನೋಡುತ್ತಿದ್ದೆ. ಅಂದು ನಮ್ಮ ಕಾಲದಲ್ಲಿ ರಾಜ್ ಕುಮಾರ್-ಲೀಲಾವತಿ ಎಂದರೆ ಬಹಳ ಜನಪ್ರಿಯ ಜೋಡಿ. ಅವರಿಬ್ಬರೂ ಅಭಿನಯಿಸಿದ್ದ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದೇನೆ. ಹೆಸರಿಗೆ ತಕ್ಕಂತೆ ಲೀಲಾವತಿಯವರು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಅಂತಹ ಅಭಿನಯ ಎಲ್ಲರಿಗೂ ಬರುವುದಿಲ್ಲ, ಅದು ರಾಜ್ ಕುಮಾರ್ ಗೆ ಸಿದ್ಧಿಸಿತ್ತು. ಲೀಲಾವತಿಯವರಿಗೂ ಕಲೆ ಒಲಿದಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೊಗಳಿದರು.

    ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಲೀಲಾವತಿಯವರು ಕೆಲಸ ಮಾಡಿದ್ದಾರೆ. ಅವರು ಗಳಿಸಿದ ಹಣವನ್ನು ಅವರೇ ಬಚ್ಚಿಟ್ಟುಕೊಳ್ಳುತ್ತಿರಲಿಲ್ಲ. ಕಷ್ಟದಲ್ಲಿರುವವರಿಗೆ, ಬಡಬಗ್ಗರಿಗೆ ದಾನ ಮಾಡುತ್ತಿದ್ದರು. ಜೀವರಾಶಿಗಳನ್ನು ಅವರು ಪ್ರೀತಿಸುತ್ತಿದ್ದುದು, ರೈತಾಪಿ ಕೆಲಸ ತಾವೇ ಮಾಡುತ್ತಿದ್ದುದು ಬಹಳ ವಿಶೇಷ. ಲೀಲಾವತಿಯವರಿಗೆ ಬೇರೆಯವರ, ಪ್ರಾಣಿಗಳ ಕಷ್ಟ ಅರ್ಥವಾಗುತ್ತಿತ್ತು. ಅವರಿಗೆ ರಾಷ್ಟ್ರದಲ್ಲಿ ಕಲಾವಿದರಿಗೆ ಸಿಗಬೇಕಾದ ಅತ್ಯುನ್ನತ ಪ್ರಶಸ್ತಿ ಸಿಗಬೇಕಾಗಿತ್ತು ಎಂಬುದು ನನ್ನ ಭಾವನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap