ತುರುವೇಕೆರೆ:
ಕಾನೂನು ಹೋರಾಟದ ಮೂಲಕ ಮಾತ್ರ ಕಲ್ಲು ಗಣಿಗಾರಿಕೆ ಶಾಶ್ವತವಾಗಿ ನಿಲ್ಲಿಸಲು ಸಾಧ್ಯ. ಗ್ರಾಮಸ್ಥರು ಹೈಕೋರ್ಟ್‍ನಲ್ಲಿ ಕೂಡಲೇ ರಿಟ್ ಅರ್ಜಿ ಸಲ್ಲಿಸಬೇಕು. ನಿಮ್ಮ ಕಾನೂನು ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದ್ದು, ಖರ್ಚು ವೆಚ್ಚಗಳನ್ನು ನಾನೇ ಬರಿಸಲಿದ್ದೇನೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಕೋಳಘಟ್ಟ ಗ್ರಾಮದಲ್ಲಿ ಶನಿವಾರ ಸುಮಾರು 50 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,
ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂದೆ ಅಹೋ ರಾತ್ರಿ ಧರಣಿ ನಡೆಸಿ ಪ್ರತಿಭಟಿಸಿದ್ದ ಸಂದರ್ಭವನ್ನು ಬಳಸಿಕೊಂಡ ಕೆಲ ರಾಜಕಾರಣಿಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಹೋರಾಟಗಾರರಿಗೆ ಬೆಂಬಲ ನೀಡುವಂತೆ ನಾಟಕವಾಡಿ ಓಲೈಸಿಕೊಳ್ಳಲು ಮುಂದಾಗಿದ್ದರು.
ನನ್ನ ಜನರಿಗೆ ತೊಂದರೆ ಆಗುತ್ತದೆ ಎಂಬ ಏಕೈಕ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿ ಕಲ್ಲು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ತಡೆಯಲು ನ್ಯಾಯಾಲಯದಿಂದ ಮಾತ್ರ ಸಾಧ್ಯ. ಹಾಗಾಗಿ ನ್ಯಾಯಾಲಯದಲ್ಲಿ ಹೋರಾಡಿ ಶಾಶ್ವತವಾಗಿ ಕಲ್ಲು ಗಣಿಗಾರಿಕೆ ನಿಲ್ಲಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ವೆಂಕಟರಾಮಯ್ಯ, ಮುಖಂಡರುಗಳಾದ ವಕೀಲ ಮುದ್ದೇಗೌಡ, ವಿ.ಬಿ.ಸುರೇಶ್, ರಾಜು, ಯೋಗಾನಂದ್, ಮಾವಿನಹಳ್ಳಿ ಶಿವಕುಮಾರ್, ಕಾಳಂಜಿಹಳ್ಳಿ ಸೋಮಣ್ಣ, ಮಲ್ಲಾಘಟ್ಟ ಹುಚ್ಚೇಗೌಡ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು. ತಾಲ್ಲೂಕಿನ ಕೋಳಘಟ್ಟ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಡಾಂಬರು ರಸ್ತೆ ಕಾಮಗಾರಿಗೆ ಶಾಸಕ ಮಸಾಲ ಜಯರಾಮ್ ಭೂಮಿ ಪೂಜೆ ನೆರವೇರಿಸಿದರು.
ತಾಲ್ಲೂಕಿನ ಕೋಳಘಟ್ಟ ಗ್ರಾಮದ ಸಮೀಪ ಕಲ್ಲು ಗಣಿಗಾರಿಕೆ ಮಂಜೂರಗಿರುವುದು ನನ್ನ ಅವಧಿಯಲ್ಲಿ ಅಲ್ಲ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಕಲ್ಲು ಗಣಿಗಾರಿಕೆ ಪ್ರಾರಂಭಿಸಲು 2014 ರಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಗ್ರಾಪಂಯ ಗಮನಕ್ಕೂ ಈ ವಿಚಾರ ತರದೇ ಏಕಾಏಕಿ ಗೋಮಾಳದಲ್ಲಿ ಕಲ್ಲುಗಣಿಯನ್ನು ನಡೆಸಿ ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಜಲ್ಲಿ ನೀಡುವಂತೆ ಜಿಲ್ಲಾಡಳಿತವು ಗುತ್ತಿಗೆದಾರರೊಡನೆ ಕರಾರು ಮಾಡಿಕೊಂಡು ಆದೇಶಿಸಿದ್ದರಿಂದ ಕಲ್ಲು ಗಣಿಗಾರಿಕೆ ಪ್ರಾರಂಭವಾಗಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2022/02/20tvk01-mla-scaled.jpg)