ಬೆಳೆಂಬೆಳ್ಳೆಗ್ಗೆ ಮೂವರ ಮೇಲೆ ಚಿರತೆ ದಾಳಿ!

 ಹರಿಹರ:

      ಆಹಾರ ಹುಡುಕಿಕೊಂಡು ಗ್ರಾಮದೊಳಗೆ ಬಂದ ಚಿರತೆ, ಮೂವರ ಮೇಲೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

      ರಮೇಶ್ ತಂದೆ ಗುಡ್ಡಪ್ಪ ಸಣ್ಣಮಾಳಗಿ, ರಾಮಪ್ಪ ತಂದೆ ಶಿವಪ್ಪ, ಶೇಖರಪ್ಪ ಎಂಬುವರು ಗಾಯಗೊಂಡಿದ್ದಾರೆ.
ಗ್ರಾಮದ ನಾಗಪ್ಪ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಎಂದಿನಂತೆ ಬೆಳಿಗ್ಗೆ ನೋಡಲು ಬಂದಿದ್ದ ಮನೆ ಮಾಲೀಕ ರಮೇಶ್ ಮನೆಯ ಮೂಲೆಯಲ್ಲಿದ್ದ ಮರಳಿನ ರಾಶಿಯ ಮೇಲೆ ಚಿರತೆ ಅವಿತು ಕುಳಿತಿರುವುದು ಕಂಡುಬಂದಿದೆ.

      ಆತಂಕಗೊಂಡ ಚಿರತೆ ಒಮ್ಮೆಗೆ ರಮೇಶ್ ಮೇಲೆ ಜಿಗಿದು ಗಾಯಗೊಳಿಸಿ ಹೊರಗೆ ಓಡಿ ಸಮೀಪದ ಜಾಲಿ ಗಿಡದ ಪೊದೆಯಲ್ಲಿ ಅವಿತು ಕುಳಿತಿದೆ. ಅಷ್ಟರಲ್ಲಿ ಗ್ರಾಮದ ಕೆಲ ಜನರು ಸೇರಿಕೊಂಡು ಚಿರತೆಯನ್ನು ಪೊದೆಯಿಂದ ಓಡಿಸಲು ಪ್ರಯತ್ನಿಸಿದಾರೆ. ಈ ವೇಳೆ ಪಟಾಕಿ ಸಿಡಿಸಲು ಸಮೀಪಕ್ಕೆ ತೆರಳಿದ್ದ ರಾಮಪ್ಪ ಹಾಗೂ ಶೇಖರಪ್ಪ ಇವರ ಮೇಲೆಯೂ ದಾಳಿ ಮಾಡಿದೆ.

      ರಾಮಪ್ಪನ ಕುತ್ತಿಗೆಯ ಹಿಂಬಾಗ ಚಿರತೆ ಬಾಯಿಂದ ಕಚ್ಚಿದ್ದು, ತೀವ್ರ ಗಾಯವಾಗಿದೆ. ರಮೇಶ್‍ಗೆ ಬೆನ್ನು, ತೊಡೆ, ಕಾಲುಗಳ ಮೇಲೆ, ಶೇಖರಪ್ಪನ ಬಲಗೈ ರಟ್ಟೆ ಮೇಲೆ ತರಚಿದ ಗಾಯಗಳಾಗಿವೆ. ಕೂಡಲೆ ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

      ಬಲೆ ಬೀಸಿರುವ ಅರಣ್ಯಾಧಿಕಾರಿಗಳು: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪೊದೆಯ ಸುತ್ತ ತಾತ್ಕಾಲಿಕ ಬೇಲಿ ನಿರ್ಮಿಸಿ ಒಂದು ಕಡೆಗೆ ಬಲೆ ಕಟ್ಟಿಕೊಂಡು ಚಿರತೆಯನ್ನು ಬಲೆಗೆ ಬೀಳಿಸಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟರು ಆದರೆ ಅಷ್ಟರಲ್ಲಾಗಲೆ ಚಿರತೆ ಮತ್ತೊಂದು ಪೊದೆಯೊಳಗೆ ಹೋಗಿರುವ ಮಾಹಿತಿ ತಿಳಿಯಿತು.
ಸುತ್ತಮುತ್ತಲ ಪೊದೆ, ತೋಪುಗಳಲ್ಲಿ ಚಿರತೆಗೆ ಹುಡುಕಾಟ ನಡೆಸಲಾಗಿದೆ. ಶಿವಮೊಗ್ಗ ಅರಣ್ಯ ಇಲಾಖೆಯಿಂದ ಅರವಳಿಕೆ ತಜ್ಞರು ಆಗಮಿಸಿದ್ದಾರೆ.

      ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಮನೆಯಿಂದ ಹೊರಬರಲು ಆತಂಕಪಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link