ಬದಲಾವಣೆಯ ಪರ್ವ ಕರ್ನಾಟಕದಿಂದಲೇ ಆಗಲಿ :ಖರ್ಗೆ

ತುಮಕೂರು

     ಜಾತಿ, ಧರ್ಮದ ಹೆಸರಲ್ಲಿ ದೇಶದ ಜನರ ನಡುವೆ ಕೋಮುವಾದವನ್ನು ಭಿತ್ತುವುದರ ಮೂಲಕ ಅಶಾಂತಿ ಉಂಟು ಮಾಡುತ್ತಿರುವ, ಭ್ರಷ್ಟ  ಬಡವರ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಬಿಜೆಪಿ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಕಿತ್ತೊಗೆದು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.

    ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕೊರಟಗೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಜೀವ್ ಭವನ ಉದ್ಘಾಟಿಸಿ, ಜಮಾಯಿಸಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಬದಲಾವಣೆಯ ಪರ್ವ ಕರ್ನಾಟಕದಿಂದಲೇ ಆರಂಭವಾಗಬೇಕು. ಹಲವು ಹೊಸತುಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ.

    ಈ ಬಾರಿಯ ಚುನಾವಣೆಯಲ್ಲೂ ಕರ್ನಾಟಕ ಮತ್ತೊಮ್ಮೆ ಬದಲಾವಣೆಯ ಪರ್ವಕ್ಕೆ ಸಾಕ್ಷಿಯಾಗಲಿದೆ ಎಂಬ ನಂಬಿಕೆ ವಿಶ್ವಾಸ ನನಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಶೂನ್ಯ, ಪ್ರಧಾನಿ ಮೋದಿ ಅವರು ನೀಡಿದ್ದ ಯಾವುದೇ ಭರವಸೆಗಳು ಈಡೇರಿಲ್ಲ, ಬದಲಾಗಿ ಉದ್ಯೋಗಗಳು ಕಡಿತಗೊಂಡು ಲಕ್ಷಾಂತರ ಜನ ಬೀದಿಗೆ ಬಿದ್ದರು ಎಂದು ಮೋದಿ ವಿರುದ್ಧ ಖರ್ಗೆ ಹರಿಹಾಯ್ದರು.

ಉತ್ತುಂಗಕ್ಕೇರಿದ ಭ್ರಷ್ಟಚಾರ :

     ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಪಕ್ಷ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ನೌಕರಿ ಪಡೆಯಲು ಪದವಿ ಬೇಕಿಲ್ಲ, ಸರ್ಕಾರಕ್ಕೆ ಲಂಚ ಕೊಡಲು ಆಸ್ತಿ ಇರಬೇಕು ಎಂಬ ಭಾವನೆಯನ್ನು ಬಿಜೆಪಿ ಜನರಲ್ಲಿ ಬೆಳೆಸುತ್ತಿದೆ. ಕರ್ನಾಟಕದ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೇರಿದೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ 40 ಲಕ್ಷ ರೂಪಾಯಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನ್ನು ನಾವು ನೋಡಿದ್ದೇವೆ ಎಂದು ದೂರಿದರು.

     ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಚ್.ಮುನಿಯಪ, ಬಿ.ಎಲ್.ಶಂಕರ್, ಸಲೀಂ ಅಹಮ್ಮದ್, ಸತೀಶ್ ಜಾರಕಿಹೊಳಿ, ಎಲ್.ಹನುಮಂತಯ್ಯ, ರಾಣಿ ಸತೀಶ್, ಎಚ್.ಆಂಜನೇಯ, ಜಿಲ್ಲೆಯ ಮುಖಂಡರಾದ ರಾಜಣ್ಣ, ವೆಂಕಟರವಣಪ್ಪ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಬ್ಲಾಕ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ್ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು.

     ಕ್ಷೇತ್ರದ ಕಾಂಗ್ರೆಸ್‌ನ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಜಿಪಂ, ತಾಪಂ ಮತ್ತು ಪಪಂ ಹಾಗೂ ಗ್ರಾಪಂ ಮಾಜಿ ಮತ್ತು ಹಾಲಿ ಚುನಾಯಿತ ಜನಪ್ರತಿನಿಧಿಗಳು, ಸಹಕಾರ ಕ್ಷೇತ್ರದ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಎಲ್ಲಾ ಪಧಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap