ತುರುವೇಕೆರೆ:
ನ.26 ರಂದು ರಸ್ತೆ ತಡೆ ಚಳವಳಿ : ರಾಷ್ಟ್ರೀಯ ಹೆದ್ದಾರಿಗೆ ರೈತರ ಲಗ್ಗೆ
ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರವೂ ವಾಪಸ್ ಪಡೆಯಬೇಕು, ಬೆಳೆ ಹಾಗೂ ಮನೆ ಹಾನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರಾಜ್ಯ ರೈತ ಸಂಘ ವತಿಯಿಂದ ನ.26 ರಂದು ತುಮಕೂರಿನ ಕ್ಯಾತ್ಸಂದ್ರದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರಿಗೆ ಕರಾಳ ಶಾಸನಗಳಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ರೈತರ ಕ್ಷೇಮೆ ಕೋರಿ ವಾಪಸ್ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರು ರೈತರ ಹೋರಾಟದ ಮುಂದೆ ಮಂಡಿಯೂರಿ ತಲೆಬಾಗಲೇಬೇಕಾಯಿತು. ಈ ವಿಜಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡದವರಿಗೆ ಅಭಿನಂದಿಸುತ್ತಿದ್ದೇವೆ ಎಂದರು.
ಮಡಿದ ರೈತರಿಗೆ ಪರಿಹಾರಕ್ಕೆ ಆಗ್ರಹ : ಕೃಷಿ ಕಾಯ್ದೆ ವಿರೋಧಿಸಿ ನಡೆದ ರೈತರ ಹೋರಾಟದಲ್ಲಿ, ಸುಮಾರು 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಅಂತಹ ರೈತರ ಮನೆಗಳ ಜವಬ್ದಾರಿಯನ್ನು ಸರ್ಕಾರ ವಹಿಸಿಕೊಂಡು ಸೂಕ್ತ ಪರಿಹಾರ ನೀಡಬೇಕು. ರೈತರ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆ ಆಗಬೇಕು, ದೇಶದ್ಯಾಂತ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಕೂಡಲೆ ವಾಪಸ್ ಪಡೆಯಬೇಕು. ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೂ ದೆಹಲಿಯ ಗಡಿಭಾಗದಲ್ಲಿ ಚಳವಳಿ ಮುಂದುವರೆಸಲು ಸಂಯುಕ್ತ ಕಿಸಾನ್ ಮೋರ್ಚ ಘೋಷಿಸಿದೆ ಎಂದು ಗೋವಿಂದರಾಜು ನುಡಿದರು.
ಗೋಷ್ಟಿಯಲ್ಲಿ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಅಸ್ಲಾಂಪಾಷ, ತಾಲೂಕು ಅಧ್ಯಕ್ಷ ಶ್ರೀನಿವಾಸ್‍ಗೌಡ ರೈತ ಮುಖಂಡರಾದ ಚಂದ್ರಶೇಖರ್, ಲೋಕೇಶ್, ಸತ್ತಗಪ್ಪ, ಶ್ರೀನಿವಾಸ್, ಭೈರಪ್ಪ, ವಸಂತಪ್ಪ, ಮೂರ್ತಿಗೌಡ, ಗೋವಿಂದರಾಜು, ನಾಗರಾಜು, ಶಿವಬಸವಯ್ಯ, ಮಂಜುನಾಥ್‍ಗೌಡ, ಪುಟ್ಟಸ್ವಾಮಿ ಇತರರು ಇದ್ದರು
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ರೈತ ಮುಖಂಡರು ಸುದ್ದಿಗೋಷ್ಟಿ ನಡೆಸಿದರು.
ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವುದನ್ನು ಈ ಚಳಿಗಾಲದ ಅದಿವೇಶನದಲ್ಲಿ ಅಂಗೀಕರಿಸಬೇಕು ಹಾಗೂ ಕಾನೂನು ಬದ್ಧವಾಗಿ ವಾಪಸ್ ಪಡೆಯಬೇಕು. ರಾಜ್ಯದಲ್ಲಿಯೂ ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ರಾಜ್ಯದಲ್ಲಿ ಜಾರಿ ಮಾಡಿರುವ ಗೋಹತ್ಯೆ ನಿಷೇಧ ಕಾಯ್ದೆ, ಕನಿಷ್ಟ ಬೆಂಬಲ ಬೆಲೆ ಖಾತರಿ ಮಾಡುವ ಕಾನೂನು, ವಿದ್ಯುತ್ ಖಾಸಗಿಕರಣ ಮಸೂದೆ, ಕಾರ್ಮಿಕ ಸಂಹಿತೆಗಳನ್ನೂ ಕೂಡ ವಾಪಸ್ ಪಡೆಯಬೇಕು.
-ಗೋವಿಂದರಾಜು, ಜಿಲ್ಲಾಧ್ಯಕ್ಷರು, ರೈತ ಸಂಘ
ಚಳವಳಿ ಯಶಸ್ಸಿಗೆ ಕೈಜೋಡಿಸಿ :
ದೇಶದಲ್ಲಿ ರೈತರ ಹೋರಾಟಗಳು ಮುಂದುವರೆಯಲಿವೆ. ನ.29 ರಂದು ದೆಹಲಿ ಕಡೆಗೆ ಪಾರ್ಲಿಮೆಂಟ್ ಮೋರ್ಚ ಹೊರಡಲಿದ್ದು, ನ.26 ರಂದು ದೇಶದ್ಯಾಂತ ಹೆದ್ದಾರಿ ಹಾಗೂ ಟೋಲ್‍ಪ್ಲಾಜಾ ತಡೆ ನಡೆಸಲಾಗುತ್ತದೆ. ಈ ಚಳವಳಿಗೆ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ