ಬೆಂಗಳೂರು:
ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಬೆಂಗಳೂರು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಐವರು ಉಪನ್ಯಾಸಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಐವರು ಲೆಕ್ಚರರ್‌ಗಳು ವಿವಿಧ ಸಂದರ್ಭಗಳಲ್ಲಿ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಜ್ಞಾನಭಾರತಿ ಆವರಣದಲ್ಲೇ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಉಪನ್ಯಾಸಕರಾದ ಸ್ವರೂಪ ಕುಮಾರ್, ರಾಮಾಂಜನೇಯ ಸೇರಿದಂತೆ ಐವರು ಉಪನ್ಯಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. FIR ದಾಖಲಾದ ಬೆನ್ನಲ್ಲೇ ಉಪನ್ಯಾಸಕರ ಹಲವು ವಿಡಿಯೋಗಳು ವೈರಲ್ ಆಗಿವೆ. ಮಕ್ಕಳಿಗೆ ಪಾಠ ಮಾಡುವ ಉಪನ್ಯಾಸಕರೇ ಕುಡಿದು ಮತ್ತರಾಗಿ ಬೇಕಾಬಿಟ್ಟಿ ವರ್ತಿಸಿದ, ಡ್ಯಾನ್ಸ್ ಮಾಡುವ ವಿಡಿಯೋ ವೈರಲ್ ಆಗಿವೆ. ಮದ್ಯ ಸೇವಿಸಿ ಅತಿಥಿ ಉಪನ್ಯಾಸಕ ರಾಮಾಂಜನೇಯ ಶರ್ಟ್ ಬಿಚ್ಚಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಉಪನ್ಯಾಸಕ ರಾಮಾಂಜನೇಯ ವಿರುದ್ಧ ಇದೀಗ ಸಾಲು ಸಾಲು ಆರೋಪಗಳು ಕೇಳಿಬಂದಿವೆ.
ಕಣ್ಣು ಕಾಣದ ವಿದ್ಯಾರ್ಥಿಗೆ ಇಂಟರ್ನಲ್ ಮಾರ್ಕ್ಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಈತನ ಮೇಲೆ ಆರೋಪಿಸಲಾಗಿದೆ. ನೇತ್ರಾನಂದ ಎಂಬ ಅಂಧ ವಿದ್ಯಾರ್ಥಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ವಿದ್ಯಾರ್ಥಿನಿ ಜೊತೆಗೆ ಕುಡಿದು ಡ್ಯಾನ್ಸ್ ಮಾಡಿದ್ದಾನೆ ಎಂದು ಹೇಳಲಾಗಿದೆ. ವಿದ್ಯಾರ್ಥಿಯನ್ನು ಎತ್ತಿಕೊಂಡು ಉಪನ್ಯಾಸಕ ಡ್ಯಾನ್ಸ್ ಮಾಡಿರುವ ವಿಡಿಯೋ ಸಹ ವೈರಲ್ ಆಗಿದೆ.
ಜವಾಬ್ದಾರಿಯಿಂದ ವರ್ತಿಸಬೇಕಾದ ಉಪನ್ಯಾಸಕರು ಬೇಜವಾಬ್ದಾರಿಯಿಂದ ವರ್ತಿಸುವ ಘಟನೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಆತಂಕ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಸುಲಿಗೆ, ಕಳವು ಪ್ರಕರಣಗಳೂ ಇಲ್ಲಿ ನಡೆದಿವೆ.
