ಬೆಂಗಳೂರು:
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾದ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ‘ಬದುಕೊಂದು ಮುಗಿಯದ ಸವಾಲು’ ಎಂದಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸಿಡಿದೆದ್ದಿರುವ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ʻನ ದೈನ್ಯಂ, ನ ಪಲಾಯನಂʼ ಎಂದು ಟ್ವೀಟ್ ಮೂಲಕ ಸದ್ದು ಮಾಡಿದ್ದಾರೆ.
‘ಯೋಧನ ಬದುಕಿನಲ್ಲಿ ಎದುರಾಗುವ ಯಾವುದೇ ಸವಾಲು ಒಳ್ಳೆಯದು ಅಥವಾ ಕೆಟ್ಟದ್ದು ಆಗಿರಲಾರದು. ಸವಾಲು ಎಂದರೆ ಅದು ಕೇವಲ ಸವಾಲು ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಹಾಗಿದ್ದರೆ ನ ದೈನ್ಯಂ, ನ ಪಲಾಯನಂ ಎಂದರೆ ಏನು? ಇದರ ನೇರ ಅರ್ಥ ಎಂದೂ ತಲೆ ಬಾಗುವುದಿಲ್ಲ, ಪಲಾಯನ ಮಾಡುವುದಿಲ್ಲ, ಬಸನಗೌಡನ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಬೆಳಗ್ಗಿನಿಂದಲೇ ಆಕ್ರೋಶಿತರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರತಿಪಕ್ಷದ ನಾಯಕನ ಆಯ್ಕೆಯ ಮೇಲ್ವಿಚಾರಣೆಗಾಗಿ ವೀಕ್ಷಕರಾಗಿ ಬಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆಯೂ ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದರು. ಉತ್ತರ ಕರ್ನಾಟಕಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದರು.