ಹುಳಿಯಾರು:

ಸಣ್ಣಪುಟ್ಟ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಟ್ಟು, ಮುಖ್ಯವಾಹಿನಿಗೆ ತಂದು ಹಾಸ್ಟೆಲ್, ಸಮುದಾಯ ಭವನ ಸೇರಿದಂತೆ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸಲು ಮುಂದುವರೆದ ಸಮುದಾಯಗಳು ಮುಂದಾಗಬೇಕು ಎಂದು ಕನಕ ಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರು ತಿಳಿಸಿದರು.
ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಕನಕ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕುರುಬ ಸಮುದಾಯ ಈಗ ರಾಜಕೀಯವಾಗಿ ಕಣ್ಣು ಬಿಡಲು ಆರಂಭಿಸಿದೆ. ಆದರೆ ಕಣ್ಣೆ ಬಿಡದ ಸಣ್ಣ ಸಮುದಾಯಗಳು ಬಹಳಷ್ಟಿವೆ. ಅವರನ್ನೂ ಸಾಮಾಜಿಕ ನ್ಯಾಯದಡಿ ಒಟ್ಟಿಗೆ ತೆಗೆದುಕೊಂಡು ಹೋದಾಗ ಮಾತ್ರ ಅಂಬೇಡ್ಕರ್, ಬಸವಣ್ಣ, ಕನಕದಾಸರಿಗೆ ನಾವು ಕೊಟ್ಟ ಗೌರವವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಸಿ.ಬಿ.ಸುರೇಶ್ಬಾಬು ಅವರು ಮಾತನಾಡಿ, ಹಿಂದೆ ನಮಗೆ ಗುರು ಮತ್ತು ಗುರಿ ಇರಲಿಲ್ಲ. ಈಗ ಗುರು ಮತ್ತು ಗುರಿ ಎರಡೂ ನಮಗಿದೆ. ಹಾಗಾಗಿ ಗುರುಗಳ ಮಾರ್ಗದರ್ಶನದಲ್ಲಿ ಎಲ್ಲರೂ ಒಟ್ಟಿಗೆ ಹೋಗಬೇಕು. ನಮ್ಮ ಪಾಲಿನ ಹಕ್ಕು ಪಡೆಯುವ ಜೊತೆಗೆ ಇತರೆ ತಳ ಸಮುದಾಯದವರಿಗೂ ಹಕ್ಕು ಕೊಡಿಸಲು ಕೈ ಜೋಡಿಸಬೇಕು ಎಂದು ತಿಳಿಸಿದರು.
ಯಳನಾಡು ರೇವಣ ಸಿದ್ಧೇಶ್ವರ ಸಿಂಹಾಸನದ ಬಸವರಾಜು ಒಡೆಯರ್, ಕುಂಚಿಟಿಗರ ಪೀಠದ ಡಾ.ಶಾಂತವೀರ ಸ್ವಾಮೀಜಿ, ಮಾಚಿದೇವ ಪೀಠದ ಬಸವ ಮಾಚಿದೇವ ಸ್ವಾಮೀಜಿ, ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಪಂ ಮಾಜಿ ಸದಸ್ಯರಾದ ವೈ.ಸಿ.ಸಿದ್ಧರಾಮಯ್ಯ, ಶ್ರೀರಾಂಪುರ ಅನಂತ್, ತಾಪಂ ಮಾಜಿ ಉಪಾಧ್ಯಕ್ಷ ಯತೀಶ್ ಸೋಮಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







