ನವದೆಹಲಿ
ಕರ್ನಾಟಕ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಸ್ಪಷ್ಟವಾಗಿ ಎರಡು ಬಣಗಳು ಸೃಷ್ಟಿಯಾಗಿವೆ. ಒಂದು ಬಣ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರೆ, ಮತ್ತೊಂದು ಬಣ ವಿಜಯೇಂದ್ರ ಪರವಾಗಿ ಗಟ್ಟಿಯಾಗಿ ನಿಂತಿದೆ. ವಿಜಯೇಂದ್ರ ವಿರುದ್ಧದ ಬಣದಲ್ಲಿ ಸಂಘಟನಾ ಚತುರ ಎಂದು ಕರೆಸಿಕೊಳ್ಳುವ ಅರವಿಂದ ಲಿಂಬಾವಳಿ ಗುರುತಿಸಿಕೊಂಡಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಸದ್ಯದಲ್ಲೇ ರಾಜ್ಯ ಬಿಜೆಪಿ ಘಟಕಕ್ಕೆ ಚುನಾವಣೆ ನಡೆಯಲಿದ್ದು ವಿಜಯೇಂದ್ರ ಮುಂದುವರೆಯಬಾರದು ಎಂಬ ಮನವಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಗೊಂದಲ, ಅದಕ್ಕೆ ಕಾರಣಗಳ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ವರಿಷ್ಠರು ಕೂಡಲೇ ಮಧ್ಯಪ್ರವೇಶ ಮಾಡದಿದ್ದರೆ ಭಿನ್ನಮತ ಇನ್ನಷ್ಟು ತೀವ್ರವಾಗಲಿದೆ ಎಂಬುದನ್ನು ನಡ್ಡಾ ಅವರ ಗಮನಕ್ಕೆ ಲಿಂಬಾವಳಿ ತಂದಿದ್ದಾರೆ.
- ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.
- ಶಾಸಕರ ಮಾತಿಗೂ ಬೆಲೆ ಇಲ್ಲ. ಯಾವುದೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ.
- ಕಾಂಗ್ರೆಸ್ ನಾಯಕರ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ.
- ಪಕ್ಷ ಸಂಘಟನೆ ಆಗುತ್ತಿಲ್ಲ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕದಲ್ಲೂ ಭಾರಿ ಲೋಪ ಆಗಿದೆ.
- ಪಕ್ಷದ ನೇಮಕದ ಸಂದರ್ಭದಲ್ಲಿ ವಿಜಯೇಂದ್ರ ಆಪ್ತರಿಗೆ ಮಣೆ ಹಾಕಲಾಗಿದೆ.
ಹೀಗೆ ವಿಜಯೇಂದ್ರ ವಿರುದ್ಧ ಅರವಿಂದ್ ಲಿಂಬಾವಳಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಲಿಂಬಾವಳಿ ಹೇಳಿದ್ದನ್ನು ತಾಳ್ಮೆಯಿಂದ ಕೇಳಿಸಿಕೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಲ್ಲವನ್ನು ಹೈಕಮಾಂಡ್ ನಾಯಕರು ಗಮಿಸುತ್ತಿದ್ದಾರೆ. ಎಲ್ಲಾ ಗೊಂದಲಗಳಿಗೂ ಫುಲ್ ಸ್ಟಾಪ್ ಹಾಕಲಿದ್ದಾರೆ ಎಂದಿದ್ದಾರೆ.
ಇನ್ನು ಅರವಿಂದ್ ಲಿಂಬಾವಳಿ ನಡ್ಡಾ ಭೇಟಿ ವೇಳೆ ಬೀದರ್‌ನಿಂದ ಬಳ್ಳಾರಿಯವರೆಗೆ ವಕ್ಫ್ ಹಠಾವೋ ದೇಶ ಬಚಾವೋ ಅಭಿಯಾನದ ಅಡಿಯಲ್ಲಿ ಪ್ರವಾಸ ನಡೆಸಿದ್ದೇವೆ. ಈ ವೇಳೆ ಅನೇಕ ಜನರು ವಕ್ಫ್ ಬೋರ್ಡ್‌ನಿಂದ ತೊಂದರೆ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ವಕ್ಫ್ ಕಾನೂನಿನಲ್ಲಿರುವ ಲೋಪದೋಷಗಳು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿವೆ ಎಂದು ನಡ್ಡಾ ಅವರಿಗೆ ಲಿಂಬಾವಳಿ ತಿಳಿಸಿದ್ದಾರೆ. ವಕ್ಪ್ ಹೋರಾಟದ ಬಗ್ಗೆ ನಡ್ಡಾ ಅವರಿಂದಲೂ ಯತ್ನಾಳ್ ಟೀಂಗೆ ಪ್ರಸಂಸೆ ವ್ಯಕ್ತವಾಗಿದೆ.