ಮಿಡಿಗೇಶಿ :
ಏ.9 ರ ಶುಕ್ರವಾರ ರಾತ್ರಿ ಮಿಡಿಗೇಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ ಗ್ರಾಮದ ಶಾಲೆಯ ಬಳಿ ಹನುಮಂತಪುರ ಗ್ರಾಮದ ನಾಲ್ಕು ವರ್ಷದ (ನಿತಿನ್ ಬಿನ್ ತಾಯಿ ಸುಶೀಲಮ್ಮ ಕೋಂ ಗುರುಸ್ವಾಮಿ) ಬಾಲಕನಿಗೆ ಸೆವೆನ್‍ಅಪ್ ಕೂಲ್ ಡ್ರಿಂಕ್ಸ್‍ಗೆ ಮದ್ಯವನ್ನು ಮಿಶ್ರಮಾಡಿ ಯಾರೋ ದುಷ್ಕರ್ಮಿಗಳು ಕುಡಿಸಿದ್ದು, ಬಾಲಕನು ಸುಮಾರು ಮೂರು ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದಾಗಿ ವರದಿಯಾಗಿದೆ. ಇದಕ್ಕಿಂತ ಇನ್ನೆಂತಹ ಅಮಾನವೀಯ ಕೃತ್ಯ ನಡೆಯಬೇಕಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಬೇಕಿದೆ.
ಛತ್ರ ಪಾಳ್ಯ, ಹನುಮಂತಪುರ ಗ್ರಾಮಗಳಲ್ಲಿನ ಅಂಗನವಾಡಿ ಶಾಲೆಗಳ ಬಳಿಯೂ ಸಹ ಪ್ರತಿ ದಿನ ರಾತ್ರಿ ಅಕ್ರಮ ಮದ್ಯ ಸೇವಿಸಿದ ಪಾಕೆಟ್‍ಗಳು, ಮದ್ಯದ ಬಾಟಲ್‍ಗಳನ್ನು ಹಾಕಿರುತ್ತಾರೆ. ಇದರಿಂದ ಮಹಿಳೆಯರು ಅಂಗನವಾಡಿ ಬಳಿ ಬರಲು ಹೆದರುತ್ತಿದ್ದು, ತಮ್ಮ ಮಕ್ಕಳನ್ನು ಅಂಗನವಾಡಿ ಶಾಲೆಗಳಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆಂದು ಕಾರ್ಯಕರ್ತೆ ಸುಜಾತ ತಿಳಿಸಿದ್ದಾರೆ.
ಹನುಮಂತಪುರ ಗ್ರಾಮವೊಂದರಲ್ಲೇ ಏಳು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಅಂಗಡಿ ಮಾಲೀಕರ ಹೆಸರುಗಳನ್ನೇ ಲಿಖಿತ ಮೂಲಕ ತಿಳಿಸಿರುತ್ತಾರೆ. ಆದ್ದರಿಂದ ಅಬಕಾರಿ ಮತ್ತು ಪೋಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಆಡಳಿತ, ಚುನಾಯಿತ ಎಲ್ಲಾ ಜನ ಪ್ರತಿನಿಧಿಗಳು ಎಚ್ಚೆತ್ತು ಕ್ರಮ ಜರುಗಿಸದಿದ್ದರೆ ಉಗ್ರಪ್ರತಿಭಟನೆ ಹಮ್ಮಿಕೊಳ್ಳವುದಾಗಿ ತಿಳಿಸಿರುತ್ತಾರೆ.
ಕಳೆದ ವರ್ಷ ಸೆಪ್ಟೆಂಬರ್ 05 ರಂದು ಸರ್ಕಾರಿ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ, ಅಕ್ಕಪಕ್ಕ ಚಿಲ್ಲರೆ ಅಂಗಡಿಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಪದಾರ್ಥಗಳಲ್ಲದೆ ಮುಖ್ಯವಾಗಿ ಅಕ್ರಮ ಮದ್ಯವನ್ನು ಹಗಲಿರುಳೆನ್ನದೆ ಯಾವುದೇ ಸಂಬಂಧಿಸಿದ ಇಲಾಖೆಗಳ ಭಯವಿಲ್ಲದೆ ಮಾರಾಟ ಮಾಡುತ್ತಿರುವ ವಿರುದ್ದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪಾಂಡುರಂಗಾರೆಡ್ಡಿ ಮತ್ತು ಸದಸ್ಯರು ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಒಟ್ಟಾಗಿ ಪ್ರತಿಭಟನೆ ಮಾಡಿದ್ದರು.
ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಲ್ಲದೆ, ಶಾಲಾ ಕಾಂಪೌಂಡಿನ ಒಳಗಡೆ ಸಂಜೆಯಲ್ಲಿ ಮದ್ಯಪಾನ ಮಾಡಿ, ಅಲ್ಲಿಯೆ ಕುಡಿದ ಬಾಟಲ್‍ಗಳು, ಪಾಕೆಟ್‍ಗಳನ್ನು ಎಸೆದುಹೋಗುತ್ತಿದ್ದಾರೆ. ಪ್ರತಿ ದಿನ ಶಿಕ್ಷಕರಿಗೆ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಸ್ವಚ್ಛಗೊಳಿಸುವ ಪಾಡಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಪ್ರೇಮಲತಾರವಿಕುಮಾರ್, ಉಪಾಧ್ಯಕ್ಷ ಸುರೇಶ್, ಸದಸ್ಯರುಗಳಾದ ಸಿದ್ದಪ್ಪ, ಹನುಮಂತರಾಯ, ಭಾಗ್ಯಮ್ಮ ಶ್ರೀನಿವಾಸ್ ಹಾಗೂ ನಾಗಲಾಪುರ, ಛತ್ರಪಾಳ್ಯ, ಹನುಮಂತಪುರ, ತೋಟಮಡಗಲು ಗ್ರಾಮಸ್ಥರು, ಪೋಷಕರು ಒಟ್ಟಾಗಿ ಶಾಲೆಯ ಮುಂಭಾಗದಲ್ಲಿ ಅಕ್ರಮ ಮಧ್ಯ ಮಾರಾಟ ಬಿಡಿ, ಸಿಗರೇಟು, ಗುಟ್ಕಾ ಪದಾರ್ಥಗಳ ಮಾರಾಟದ ಅಂಗಡಿಗಳನ್ನು ಶಾಲೆಯ ಬಳಿಯಿರುವ ಪ್ರತಿಭಟನೆ ನಡೆಸಿದ್ದರು. ಗ್ರಾಪಂ ಪಿಡಿಓ ಜಂಜೇಗೌಡ, ಅಧ್ಯಕ್ಷರು, ಉಪಾಧ್ಯಕ್ಷರು ಮಾತನಾಡಿ, ಅಂಗಡಿಯನ್ನು ತೆರವುಗೊಳಿಸುವಂತೆ ಇಂದೇ ನೋಟೀಸ್ ನೀಡಲಾಗುವುದು. ಇಲ್ಲದಿದ್ದಲ್ಲಿ ಅಂಗಡಿಯನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿಯು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದರು. ಅಕ್ರಮ ಮದ್ಯ ಮಾರಾಟದ ಬಗ್ಗೆ ರಕ್ಷಣಾ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತಕಡೆ ತಿರುಗಿಯೂ ನೋಡದಿರುವ ಒಳಮರ್ಮವಾದರೂ ಏನು?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ