ಬೆಂಗಳೂರು
ಮುಂಬರುವ ವಿಧಾನಸಭಾ ಚುನಾವಣೆಗೆ ರಣೋತ್ಸಾಹದಲ್ಲಿ ಮುನ್ನಡೆಯುತ್ತಿರುವ ಕಾಂಗ್ರೆಸ್ ಮುಖಂಡರು ಈ ತಿಂಗಳಾಂತ್ಯಕ್ಕೆ 120 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಹಿರಿಯ ಮುಖಂಡರು ಬಿರುಸುಗೊಳಿಸಿದ್ದು, ಈ ತಿಂಗಳ ಕೊನೆಯ ವಾರದಲ್ಲಿ 120 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಅಭ್ಯರ್ಥಿಗಳ ಆಯ್ಕೆ ಸಂಬAಧ ಈಗಾಗಲೇ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್‌ನ ಚುನಾವಣಾ ಸಮಿತಿ ಸಭೆ ಫೆ. 2 ರಂದು ನಡೆದಿದ್ದು, ಈ ಸಭೆಯಲ್ಲಿ 150 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಲಾಗಿದೆ. ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿಯನ್ನು ಕಳುಹಿಸಿದ್ದು, ಆದಷ್ಟು ಶೀಘ್ರ ಪಟ್ಟಿ ಬಿಡುಗಡೆಯಾಗಲಿದೆ.
ರಾಜ್ಯ ಚುನಾವಣಾ ಸಮಿತಿ ಸಭೆಯ ನಂತರ ರಣದೀಪ್ ಸುರ್ಜೆವಾಲಾ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆಯೂ ಅಭ್ಯರ್ಥಿ ಆಯ್ಕೆ ಸಂಬಧ ಪ್ರತ್ಯೇಕ ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ನೀಡಿದ್ದು, ಇನ್ನು 2-3 ದಿನಗಳಲ್ಲಿ ಪಟ್ಟಿ ಕಾಂಗ್ರೆಸ್ ನ ರಾಷ್ಟಿಯ ಚುನಾವಣಾ ಸಮಿತಿಗೆ ರವಾನೆಯಾಗಲಿದೆ.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಂಡ ನಂತರ ಎಲ್ಲ ಸಮಿತಿ ಗಳನ್ನು ವಿಸರ್ಜಿಸಲಾಗಿತ್ತು. ಎರಡು ದಿನಗಳ ಹಿಂದೆ ಕರ್ನಾಟಕ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಹಿರಿಯ ಕಾಂಗ್ರೆಸ್ ನಾಯಕ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿ ರಾಜ್ಯ ಚುನಾವಣಾ ಸಮಿತಿ ಕಳುಹಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ ಅಂತಿಮವಾಗಿ ಎಐಸಿಸಿ ಅಧ್ಯಕ್ಷರಿಗೆ ಪಟ್ಟಿ ರವಾನಿಸಲಿದೆ. ಎಐಸಿಸಿ ಅಧ್ಯಕ್ಷರ ಅನುಮೋದನೆ ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.
ಕಾಂಗ್ರೆಸ್‌ನ ಹಾಲಿ ಶಾಸಕರೆಲ್ಲರಿಗೂ ಮೊದಲ ಪಟ್ಟಿಯಲ್ಲೇ ಟಿಕೆಟ್ ಸಿಗಲಿದ್ದು, ಉಳಿದಂತೆ ಕೆಲವು ಕ್ಷೇತ್ರಗಳಿಗೆ ಒಬ್ಬ ಅಭ್ಯರ್ಥಿಯನ್ನೇ ರಾಜ್ಯಚುನಾವಣಾ ಸಮಿತಿ ಸಭೆ ಅಂತಿಮಗೊಳಿಸಿದ್ದು, ಪೈಪೋಟಿ ಇರುವ ಕಡೆ 2-3 ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಅವರ ತೀರ್ಮಾನಕ್ಕೆ ಅಭ್ಯರ್ಥಿಗಳ ಆಯ್ಕೆಯನ್ನು ಬಿಡಲು ರಾಜ್ಯನಾಯಕರು ನಿರ್ಧರಿಸಿದ್ದಾರೆ. ಬಿಜೆಪಿಗಿಂತ ಮೊದಲೇ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಚುನಾವಣಾ ಪ್ರಚಾರಕ್ಕೆ ಹೆಚ್ಚು ಅವಕಾಶ ನೀಡಲು ಕಾಂಗ್ರೆಸ್ ಪಕ್ಷ ಈ ತಿಂಗಳಾತ್ಯದಲ್ಲಿ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ