ಕೊರಟಗೆರೆ
ರಾಜಕೀಯ ದೃಷ್ಟಿಯಿಂದ ರಾಜ್ಯದ ಜನರನ್ನು ನಂಬಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ನಾಟಕ ಆಡುತ್ತಿದ್ದಾರೆ ಎಂದು ತುಮಕೂರು ಸಂಸದ ಬಸವರಾಜು ಆರೋಪ ಮಾಡಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕೊರಟಗೆರೆ ಘಟಕದ ಬಿಜೆಪಿ ಪಕ್ಷದ ವತಿಯಿಂದ ಗುರುವಾರ ತಮಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಮತ್ತು ರಾಷ್ಟ್ರದ ಹಿರಿಯ ನಾಯಕ ದೇವೇಗೌಡರಿಗೆ ತುಮಕೂರು ಲೋಕಸಭಾಕ್ಷೇತ್ರದ ಮತದಾರರು ಮರೆಯಲಾಗದ ಸವಿನೆನಪು ನೀಡಿದ್ದಾರೆ.. ಕ್ಷೇತ್ರದಲ್ಲಿ ಸಮಸ್ಯೆ ಇರುವ ಸಾರ್ವಜನಿಕರು ಏಜೆಂಟರ ಮೂಲಕ ನನ್ನ ಕಚೇರಿಗೆ ಯಾರೂ ಬರಬಾರದು. ಸಾರ್ವಜನಿಕರೆ ನನ್ನೊಂದಿಗೆ ನೇರವಾಗಿ ಬಂದು ಭೇಟಿ ಆಗುವ ಹಕ್ಕು ನಿಮಗೆ ಇದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಇತಿಹಾಸವುಳ್ಳ ಕೊರಟಗೆರೆ ಕ್ಷೇತ್ರದ ಮತದಾರರು ಸ್ವಾಭಿಮಾನ ಏನೆಂಬುದನ್ನು ತೋರಿಸಿದ್ದಾರೆ.
ದೇಶದ ರಕ್ಷಣೆ ಮತ್ತು ಅಭಿವೃದ್ದಿಗೆ ಮತ ನೀಡಿರುವ ಮತದಾರರ ಋಣ ನಮ್ಮೆಲ್ಲರ ಮೇಲಿದೆ. ಭಾರತ ದೇಶದ ಸ್ವಾಭಿಮಾನಿ ಮತದಾರರು ದೇಶದ ಭವಿಷ್ಯವನ್ನು ಬರೆದಿದ್ದಾರೆ. ಹೊಸ ವೈದ್ಯರಿಗಿಂತ ಹಳೆ ರೋಗಿಯೇ ಮೇಲು ಎಂಬುವಂತೆ ಬಸವರಾಜು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತಾರೆ ಎಂದು ಭರವಸೆ ನೀಡಿದರು.
ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದಲೆ ಜೆಡಿಎಸ್ ಪಕ್ಷದ ಸೋಲಾಗಿದೆ. ಕುಟುಂಬ ರಾಜಕಾರಣಕ್ಕೆ ತುಮಕೂರಿನ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಂದಾಗಿ ತಕ್ಕ ಪಾಠ ಕಲಿಸಿದ್ದಾರೆ. ದೇವೇಗೌಡರ ಪರವಾಗಿ ಪ್ರಚಾರದ ವೇಳೆ ಜೀರೋ ಟ್ರಾಫಿಕ್‍ನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಬಂದು ಹೋಗಿದ್ದೇ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಮಾಜಿ ಜಿಪಂ ಅಧ್ಯಕ್ಷೆ ಕಮಲ, ಜಿಪಂ ಸದಸ್ಯ ಹುಚ್ಚಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪವನಕುಮಾರ್, ಪಪಂ ಪ್ರದೀಪಕುಮಾರ್, ಮುಖಂಡರಾದ ತಿಮ್ಮಜ್ಜ, ಗುರುದತ್, ಸುಶೀಲಮ್ಮ, ವಿಶ್ವನಾಥ, ಸ್ವಾಮಿ, ಉಮೇಶಚಂದ್ರ, ಕೋಟೆರಂಗನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
