ಹುಳಿಯಾರು:
ಹುಳಿಯಾರಿನ ಹೆಸರಾಂತದಾನಿ ಶತಾಯುಷಿ ಟಿ.ಆರ್.ಶ್ರೀನಿವಾಸಶೆಟ್ರು (103) ಭಾನುವಾರ ಬೆಳಿಗ್ಗೆ ನಿಧನರಾದರು.
ವಯೋಸಹಜ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಬಿಟ್ಟರೆ ಹಾಸಿಗೆ ಹಿಡಿಯುವಷ್ಟು ಗಂಭೀರ ಕಾಯಿಲೆಗಳು ಇವರಿಗೆ ಇರಲಿಲ್ಲ. ಹಾಗಾಗಿಯೇ ಎಂದಿನಂತೆ ಕುಟುಂಬದ ಸದಸ್ಯರೊಂದಿಗೆ ಊಟ, ಮಾತು ಕತೆ ಮುಗಿಸಿ ಮಲಗಿದ್ದರು. ಆದರೆ ಬೆಳಗಿನ ಜಾವ 3.30 ಕ್ಕೆ ಎದ್ದು ನೀರು ಕೇಳಿ ಕುಡಿದು ಮಲಗಿದ್ದವರು ಮತ್ತೆ ಏಳಲೇಇಲ್ಲ.
ಮೃತರು ಹುಳಿಯಾರು ವಾಸವಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಆರ್ಯವೈಶ್ಯ ಮಂಡಳಿಗೆ 40 ವರ್ಷಗಳ ಕಾಲ ಅಧ್ಯಕ್ಷರಾಗಿ, ರೋಟರಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳಿಗೆ ಅಧ್ಯಕ್ಷರು, ಕಾರ್ಯದರ್ಶಿಗಳು, ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಾರ್ಥಕ ಜೀವನ ನಡೆಸಿದ್ದಾರೆ.
ಹುಳಿಯಾರಿನ ಬಹುತೇಕ ಎಲ್ಲಾ ದೇವಸ್ಥಾನಗಳು ಸೇರಿದಂತೆ ನಾಡಿನ ಅನೇಕ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಕೊಡುಗೆ ನಿಡಿದ್ದಾರೆ. ಶಾಲಾ ಕಾಲೇಜು, ಆಸ್ಪತ್ರೆ, ಪಾರ್ಕ್‍ಗಳಿಗೆ ಧನ ಸಹಾಯ ಮಾಡಿದ್ದಾರೆ. ರೋಟರಿ, ಥಿಯಾಸಾಫಿಕಲ್, ರೈತ ಸಂಘ ಸೇರಿದಂತೆ ಅನೇಕ ಸಂಘಸಂಸ್ಥೆಗಳ ಸಮಾಜಮುಖಿ ಕೆಲಸಗಳಿಗೆ ಉದಾರ ನೆರವು ನೀಡಿ ಈ ಭಾಗದ ದಾನಶೂರ ಕರ್ಣರಾಗಿದ್ದರು.
ಮೃತರು 3 ಗಂಡು ಮತ್ತು 3 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಹುಳಿಯಾರು ಮುಕ್ತಧಾಮದಲ್ಲಿ ಭಾನುವಾರ ಸಂಜೆ ನೆರವೇರಿತು. ಶಾಸಕ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವಾನ ಹೇಳಿದರು.