ಹುಳಿಯಾರು:
ಬೆಂಗಳೂರಿನ ಐಎಂಎ ಜುವೆಲರ್ಸ್ ಸಂಸ್ಥೆ ಹುಳಿಯಾರು ಪಟ್ಟಣದ ಸಾರ್ವಜನಿಕರಿಂದಲೂ ಹಣ ಪಾವತಿಸಿಕೊಂಡು ವಂಚನೆ ಮಾಡಿದೆ ಎಂದು ವಂಚನೆಗೊಳಗಾದ ಹುಳಿಯಾರು ನಿವಾಸಿ ಮಹಮದ್ ಫಯಾಜ್ ಸ್ಪೋಟಕ ಮಾಹಿತಿ ನೀಡಿದ್ದಾರೆ.
ಪಟ್ಟಣದ ಹಲವು ಜನರು ಸುಮಾರು 3–4 ವರ್ಷಗಳಿಂದ ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು ಕಂತಿನಲ್ಲಿ ಲಾಭಾಂಶದ ಹಣ ವಾಪಸ್ ಪಡೆದಿದ್ದರು. ಇದನ್ನು ನೋಡಿಯೇ ನಾನೂ ಸಹ ಐಎಂಎ ಸಂಸ್ಥೆಗೆ 10 ಲಕ್ಷ ರೂ. ತೊಡಗಿಸಿದ್ದೇನೆ. ಒಂದು ಅಂದಾಜಿನ ಪ್ರಕಾರ ಹುಳಿಯಾರು ಪಟ್ಟಣದಿಂದ 1 ಕೋಟಿ ರೂಗೂ ಅಧಿಕ ಹಣ ಐಎಂಎ ಸಂಸ್ಥೆಯಲ್ಲಿ ಹೂಡಿಕೆಯಾಗಿದೆ. ಪೊಲೀಸ್ ಠಾಣೆಗೆ ಕೆಲವರು ದೂರು ನೀಡಿದ್ದು ಕೆಲವರು ನೀಡಿಲ್ಲ ಎಂದಿದ್ದಾರೆ.
ಬೆಂಗಳೂರಿನ ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳ ಕಂತಿನಲ್ಲಿ ಲಾಭಾಂಶದ ಹೆಸರಿನಲ್ಲಿ ಮರುಪಾವತಿ ಮೂಲಕ ಅಧಿಕ ಪ್ರಮಾಣದ ಹಣ ನೀಡಲಾಗುತ್ತದೆ ಎಂಬುದು 3–4 ವರ್ಷಗಳ ಹಿಂದೆ ಯೂಟೂಬ್ ಜಾಹೀರಾತಿನಲ್ಲಿ ತಿಳಿದಿತ್ತು. ನನ್ನ ಸಂಬಂಧಿಗಳು ಸೇರಿದಂತೆ ನನಗೆ ಪರಿಚಯವಿರುವ ಹಲವರು ಪ್ರತಿ ತಿಂಗಳು ಹಣ ವಾಪಸ್ ಪಡೆಯುತ್ತಿರುವ ಬಗ್ಗೆ ಹೇಳಿದ್ದರು. ಹಾಗಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನ ಶಿವಾಜಿನಗರದ ಐಎಂಎ ಸೊಸೈಟಿ ಕಚೇರಿಗೆ ಖುದ್ದಾಗಿ ತೆರಳಿ 1 ಸಾವಿರ ರೂ. ಶೇರು ಹಣ ಹಾಗೂ 10 ಲಕ್ಷ ರೂ. ಡಿಪಾಸಿಟ್ ಹಣವನ್ನು ಪಾವತಿಸಿದ್ದೆ ಎಂದು ವಿವರಿಸಿದರು.
ಫೆಬ್ರವರಿ ಮಾಹೆಯಲ್ಲಿ ಡಿಪಾಸಿಟ್ ಮಾಡಿದ್ದು ಮಾರ್ಚ್‍ನಲ್ಲಿ 25 ಸಾವಿರ ರೂ. ಏಪ್ರಿಲ್‍ನಲ್ಲಿ 11 ಸಾವಿರ ರೂ. ಲಾಭಾಂಶ ಕೊಟ್ಟಿದ್ದರು. ನಂತರ ಬಡ್ಡಿ ಹಣ ನೀಡಲಿಲ್ಲ. ಈ ಕುರಿತು ವಿಚಾರಿಸಿದಾಗ ಕೆಲವೇ ದಿನಗಳಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದಿದ್ದರು. ರಂಜಾನ್ ಹಬ್ಬದ ನಂತರ 2 ತಿಂಗಳ ಬಡ್ಡಿ ಹಣ ಒಟ್ಟಿಗೆ ಪಾವತಿಸುವುದಾಗಿ ಐಎಂಎ ಸೊಸೈಟಿಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಅಷ್ಟರಲ್ಲಿ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಪರಾರಿಯಾದ ವಿಷಯ ಗೊತ್ತಾಯಿತು. ಹಾಗಾಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಬಂದಿರುವುದಾಗಿ ತಿಳಿಸಿದರು.
ನಾನು ಬಿಡಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದು ಹುಳಿಯಾರಿನಲ್ಲಿನ ನನ್ನ ಪತ್ನಿ ಹೆಸರಿನ ನಿವೇಶನ ಮತ್ತು ಹಿರಿಯೂರು ತಾಲೂಕಿನ ಜೆಜಿ ನಗರದಲ್ಲಿ ನನ್ನ ಹೆಸರಿನಲ್ಲಿದ್ದ ನಿವೇಶನಗಳನ್ನು ಮಾರಿ ಹಣ ತಂದು 10 ಲಕ್ಷ ರೂ. ಡಿಪಾಸಿಟ್ ಮಾಡಿದ್ದೇನೆ. ಡಿಪಾಸಿಟ್ ಮಾಡಿದ್ದಕ್ಕೆ ಸ್ವೀಕೃತಿ ರಸೀದಿ ಕೊಟ್ಟಿದ್ದಾರೆ. ನಾನು ಇವರಲ್ಲಿ ಹೂಡಿಕೆ ಮಾಡಿ ಲಾಭಾಂಶ ಪಡೆಯುತ್ತಿದ್ದೆ ಎನ್ನುವುದಕ್ಕೆ 2 ತಿಂಗಳು ಅವರು ನನ್ನ ಬ್ಯಾಂಕ್ ಖಾತೆಗೆ ಹಣ ಹಾಕಿರುವುದು ನಿದರ್ಶನವಾಗಿದೆ. ಹಾಗಾಗಿ ಸರ್ಕಾರ ತಕ್ಷಣ ನಮ್ಮ ಹಣ ನಮಗೆ ಹಿಂದಿರುಗಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
