ಸಮಯಕ್ಕೆ ಹಾಜರಾಗದ ನೌಕರರಿಗೆ ನೋಟೀಸ್

ದಾವಣಗೆರೆ :

    ನಗರದ ಪಿಬಿ ರಸ್ತೆಯಲ್ಲಿರುವ ತಾಲೂಕು (ತಹಶೀಲ್ದಾರ್) ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕಚೇರಿಯ ವ್ಯವಸ್ಥೆಯನ್ನು ಪರಿಶೀಲಿಸಿ, ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೇ ಇದ್ದ 28 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡುವಂತೆ ಸೂಚಿಸಿದ್ದಾರೆ.

    ಸೋಮವಾರ ಬೆಳಿಗ್ಗೆ 10.05ಕ್ಕೆ ದಾಣಗೆರೆಯ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕಚೇರಿಗೆ ಸರಿಯಾದ ಸಮಯಕ್ಕೆ ಯಾರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬುದರ ಬಗ್ಗೆ ಸಮಗ್ರ ಮಾಹಿತಿ ಪಡೆದು, ಕಚೇರಿಯ ಸಮಯವಾಗಿದ್ದರೂ ಕರ್ತವ್ಯಕ್ಕೆ ಹಾಜರು ಆಗದೇ ಇದ್ದ 28 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನೋಟೀಸ್ ಜಾರಿ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಈ ವೇಳೆ ಮತನಾಡಿದ ಡಿಸಿ ಮಹಾಂತೇಶ್ ಬೀಳಗಿ, ಸಾರ್ವಜನಿಕರು ತಮ್ಮ ಅಗತ್ಯ ಕೆಲಸ, ಕಾರ್ಯಗಳಿಗೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿದಾಗ ಕಚೇರಿಯಲ್ಲಿ ಸಿಬ್ಬಂದಿಗಳು ಲಭ್ಯವಿಲ್ಲದಿದ್ದರೆ, ಅವರ ಕೆಲಸ ಕಾರ್ಯಗಳು ಆಗುವುದಾದರೂ ಹೇಗೆ? ಎಂದು ಪ್ರಶ್ನಿಸಿ, ಅಂತಹ ಅಧಿಕಾರಿಗಳಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು, ಇನ್ನೂ ಮುಂದೆಯೂ ವಿಳಂಬವಾಗಿ ಕಚೇರಿಗೆ ಹಾಜರಾಗುವುದು ಕಂಡುಬಂದರೆ ಮುಂದಿನ ದಿನಗಳಲ್ಲಿ ಅಂತಹ ನೌಕರರ ವಿರುದ್ಧ ಕಾನೂನು ರೀತಿಯ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

     ಕಚೇರಿಯಲ್ಲಿ ತೆರೆದಿರುವ ಆಧಾರ್ ಕೇಂದ್ರದ ಬಳಿ ಸರತಿ ಸಾಲಿನಲ್ಲಿ ನಿಂತ್ತಿದ್ದ ಸಾರ್ವಜನಿಕರು, ಪುಟ್ಟ ಮಕ್ಕಳೊಂದಿಗೆ ಬಂದ ಮಹಿಳೆಯರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು, ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಅಲ್ಲದೇ, ನಗರದ ವಿವಿಧೆಡೆ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್‍ಗಳಲ್ಲಿ ಆಧಾರ್ ಕೇಂದ್ರಗಳಿದ್ದು, ನೂತನವಾಗಿ ಆಧಾರ್ ಕಾರ್ಡ್ ಮಾಡಿಸುವವರು ಹಾಗೂ ತಿದ್ದುಪಡಿ ಕೆಲಸಗಳಿದ್ದರೆ ತಮ್ಮ ಸಮೀಪದಲ್ಲಿರುವ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್‍ಗಳಲ್ಲಿ ಮಾಡಿಸಿಕೊಳ್ಳಬಹುದೆಂದು ಸೂಚಿಸಿದರು.ಈ ಸಂದರ್ಭದಲ್ಲಿ ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರು, ತಮ್ಮನ್ನು ಅಲೆದಾಡಿಸುವ ಅಧಿಕಾರಿಗಳ ವರ್ತನೆಯ ವಿರುದ್ಧ ಜಿಲ್ಲಾಧಿಕಾರಿಗಳ ಎದುರು ಅಳಲು ತೋಡಿಕೊಂಡರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link