ದಾವಣಗೆರೆ:
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆದರಿಕೆಗೆ ಮಣಿದು, ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು, ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಮತದಾರರ ಹಾಗೂ ರಾಜ್ಯದ ಗೌರವ ಕಾಪಾಡಬೇಕೆಂದು ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಮನವಿ ಮಾಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜೀನಾಮೆ ನೀಡಿರುವ ಮೈತ್ರಿ ಪಕ್ಷದ 15 ಜನ ಅತೃಪ್ತ ಶಾಸಕರು, ಶಾಸಕ ಸ್ಥಾನಗಳ ಅನರ್ಹತೆಗೆ ಅವಕಾಶ ಮಾಡಿಕೊಡದೇ, ಸರ್ಕಾರದ ಪರವಾಗಿ ಮತ ಚಲಾಯಿಸುವ ಮೂಲಕ ಕೋಮುವಾದಿ ಪಕ್ಷವಾಗಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಸಲಹೆ ನೀಡಿದರು.
ರಾಜೀನಾಮೆ ನೀಡಿರುವ 15 ಜನ ಶಾಸಕರೆಲ್ಲರೂ ಸಾವಿರಾರು ಕೋಟಿ ಸರದಾರರಾಗಿದ್ದಾರೆ. ಹೀಗಾಗಿ ಬಿಜೆಪಿಯ ಹಣದ ಆಮೀಷಕ್ಕೆ ಬಲಿಯಾಗಿ ರಾಜೀನಾಮೆ ನೀಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸರ್ಕಾರದ ಸ್ವಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐಗಳ ದಾಳಿ ಮಾಡಿಸುವ ಬಗ್ಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆಂದು ಆರೋಪಿಸಿದರು.
ಅಧಿಕಾರದ ಹಪಹಪಿಯಿಂದ ಸ್ವತಃ ಯಡಿಯೂರಪ್ಪನವರೇ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಶಾಸಕರೊಬ್ಬರನ್ನು ಆಪರೇಷನ್ ಕಮಲದ ಮೂಲಕ ಸೆಳೆಯಲು ಮುಂದಾದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದು ರಾಜಕೀಯವಾಗಿ ಬೆತ್ತಲಾಗಿದ್ದರು. ಹೀಗೆ ಐದು ಬಾರಿ ಆಪರೇಷನ್ ಕಮಲಕ್ಕೆ ಪ್ರಯತ್ನಿಸಿ ವಿಫಲವಾಗಿರುವ ಬಿಜೆಪಿ ಈಗ 6ನೇ ಬಾರಿಗೆ ವ್ಯವಸ್ಥಿತವಾಗಿ ಆಪರೇಷನ್ ಕಮಲ ನಡೆಸಲು ಮುಂದಾಗಿದೆ ಎಂದು ದೂರಿದರು.
ಮೈತ್ರಿ ಪಕ್ಷದ 15 ಜನ ಶಾಸಕರು ರಾಜೀನಾಮೆ ನೀಡಿರುವುದರ ಹಿಂದೆ ಆಪರೇಷನ್ ಕಮಲದ ಕೈವಾಡವಿದೆ. ಆದರೆ, ಬಿಜೆಪಿ ನಾಯಕರು ನಾವು ಯಾವುದೇ ಆಪರೇಷನ್ ನಡೆಸುತ್ತಿಲ್ಲ ಎಂಬುದಾಗಿ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕುತ್ತಿದ್ದಾರೆ. ಹಾಗಾದರೆ, ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಸೇರಿದ ವಿಮಾನ ಅತೃಪ್ತ ಶಾಸಕರನ್ನು ಹತ್ತಾರು ಬಾರಿ ಬೆಂಗಳೂರಿನಿಂದ ಮುಂಬೈಗೆ, ಮುಂಬೈಯಿಂದ ಬೆಂಗಳೂರಿಗೆ ಏಕೆ ಹೊತ್ತುಕೊಂಡು ಓಡಾಡಿದೆ? ಎಂದು ಪ್ರಶ್ನಿಸಿದರು.
ಬಿಜೆಪಿ ಆಪರೇನ್ ಕಮಲವನ್ನು ನಡಸದೇ ಇದಿದ್ದರೆ, ಅತೃಪ್ತ ಶಾಸಕರಿಗೆ ಮುಂಬೈಯಲ್ಲಿ ಬಿಜೆಪಿ ನಾಯಕರೇ ಏಕೆ ಪಂಚತಾರ ಹೋಟೆಲ್ ಬುಕ್ ಮಾಡಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕರಾದ ಡಾ.ಅಶ್ವಥ್‍ನಾರಾಯಣ್, ಆರ್.ಅಶೋಕ್, ಮಾಜಿ ಸ್ಪೀಕರ್ ಭೋಪಯ್ಯ ಮತ್ತಿತರರು ಅದೇ ಹೋಟೆಲ್‍ನಲ್ಲಿ ಏಕೆ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಅವರ ಆಪ್ತ ಸಹಾಯಕ ಸಂತೋಷ್‍ಕುಮಾರ್ ಏಕೆ ಅದೇ ಹೋಟೆಲ್‍ಗೆ ಪದೇ, ಪದೇ ಭೇಟಿ ನೀಡುತ್ತಿದ್ದಾರೆಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಈ ಬಾರಿಯೂ ಯಾವುದೇ ಕಾರಣಕ್ಕೂ ಬಿಜೆಪಿಯ ಆಪರೇಷನ್ ಕಮಲ ಫಲಿಸುವುದಿಲ್ಲ. ಹಾಗೂ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದು, ಅವರ ಕನಸು ತಿರುಕನ ಕನಸಾಗಿಯೇ ಉಳಿಯಲಿದೆ. ಮೈತ್ರಿ ಪಕ್ಷಗಳ ಅತೃಪ್ತ ಶಾಸಕರು ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ಪರವಾಗಿ ಮತ ಚಲಾಯಿಸಲಿದ್ದಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಂಜಾ ನಾಯ್ಕ, ಅಲ್ಲಾವಲಿ ಗಾಜಿಖಾನ್, ಲಿಯಾಕತ್ ಅಲಿ, ಎಚ್.ಹರೀಶ್, ಡಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.