TSCL : ಗೊಂದಲಗಳಿಂದ ತುಂಬಿ ಹೋಗಿರುವ ಸ್ಮಾರ್ಟ್ ಸಿಟಿ ಚೆಂಬರ್ ಗಳು..!

ತುಮಕೂರು
ವಿಶೇಷ ವರದಿ : ರಾಕೇಶ್.ವಿ
     ನಗರದಲ್ಲಿ ಆಯ್ದ ವಾರ್ಡುಗಳು ಸೇರಿದಂತೆ ನಗರದಾದ್ಯಂತ ಕೆಲ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವುದು ಸರಿಯಷ್ಟೇ ಆದರೆ ಇಂದು ಈ ಕಾಮಗಾರಿಗಳು ಗೊಂದಲದ ಗೂಡಾಗಿ ಪರಿಣಮಿಸಿವೆ. ಅದರಲ್ಲಿ ಮುಖ್ಯವಾಗಿ ಯುಟಿಲಿಟಿ ಚೇಂಬರ್‍ಗಳ ಕಾಮಗಾರಿಯಲ್ಲಿ ಅನೇಕ ಗೊಂದಲಗಳಿವೆ.
      ನಗರದಲ್ಲಿ ಬರೊಬ್ಬರಿ 643 ಯುಟಿಲಿಟಿ ಚೇಂಬರ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಬಡಾವಣೆ ಪ್ರದೇಶಗಳಲ್ಲಿ 364 ಚೇಂಬರ್‍ಗಳನ್ನು ನಿರ್ಮಾಣ ಮಾಡಿದರೆ ಉಳಿದಂತೆ ಇತರೆ ಸ್ಮಾರ್ಟ್ ರಸ್ತೆಗಳಲ್ಲಿ  279 ಚೇಂಬರ್‍ಗಳನ್ನು ನಿರ್ಮಾಣ ಮಾಡಿದ್ದಾರೆ. ಬಡಾವಣೆಗಳಲ್ಲಿ ಒಂದು ಬ್ಲಾಕ್‍ನ ಚೇಂಬರ್ ನಿರ್ಮಾಣ ಮಾಡಿದರೆ ಸ್ಮಾಟ್ ರಸ್ತೆಗಳಲ್ಲಿ ಎರಡು ಬ್ಲಾಕ್‍ಗಳ ಚೇಂಬರ್‍ಗಳನ್ನು ನಿರ್ಮಾಣ ಮಾಡಲಾಗಿದೆ.
      ಬೆಸ್ಕಾಂನ ವಿವಿಧ ಕೇಬಲ್‍ಗಳು, ಅಂತರ್ಜಾಲದ ಕೇಬಲ್‍ಗಳು ಅಳವಡಿಸಲು, ಮುಂದೆ ಯಾವುದೇ ಕಾರಣಕ್ಕೂ ರಸ್ತೆ ಅಗೆಯುವ ಪ್ರಮೇಯವೇ ಬರಬಾರದೆಂದು ಈ ಚೇಂಬರ್‍ಗಳನ್ನು ಮಾಡಲಾಗುತ್ತಿದೆ. ಆದರೆ ಈ ಚೇಂಬರ್‍ಗಳೇ ಸಾರ್ವಜನಿಕರಿಗೆ ಸಮಸ್ಯೆಯಂತಾದರೆ ಇದಕ್ಕೆ ಪರಿಹಾರವಾದರೂ ಏನು…?  ಈಗಾಗಲೇ  ಸ್ಮಾರ್ಟ್ ಸಿಟಿಯವರು ಚೇಂಬರ್‍ಗಳನ್ನು ನಿರ್ಮಾಣ ಮಾಡಿ, ಒಂದಕ್ಕೊಂದು ಸಂಪರ್ಕ ಕಲ್ಪಿಸಲು ಪೈಪುಗಳನ್ನು ಅಳವಡಿಕೆ ಮಾಡಲಾಗಿದ್ದು, ಈ ಕಾರ್ಯವನ್ನು ಮುಂದುವರೆಸಿದ್ದಾರೆ.
ಅಲ್ಲಲ್ಲಿ ತೆರೆದ ಚೇಂಬರ್‍ಗಳು
        ನಗರದಲ್ಲಿ ಮಾಡಲಾದ ಚೇಂಬರ್‍ಗಳನ್ನು ಮುಚ್ಚಲಾಗುತ್ತಿದ್ದು, ಇನ್ನೂ ಕೆಲ ಬಡಾವಣೆಗಳಲ್ಲಿ, ಕೆಲ ರಸ್ತೆಗಳಲ್ಲಿ ಹಾಗೇ ಬಿಡಲಾಗಿದೆ. ಇಲ್ಲಿ ಚೇಂಬರ್‍ಗಳನ್ನು ಮಾಡಿ ಈಗಾಗಲೇ ಮೂರು ತಿಂಗಳಾದರೂ ಇನ್ನೂ ಅದನ್ನು ಮುಚ್ಚುವ ಕೆಲಸ ಮಾಡಿಲ್ಲ. ರಾತ್ರಿ ವೇಳೆ ಯಾರಾದರೂ ಚೇಂಬರ್ ಒಳಗಡೆ ಬಿದ್ದರೆ ಏನು ಪರಿಸ್ಥಿತಿ, ಇದರ ಹೊಣೆ ಯಾರದ್ದು..?
ರಸ್ತೆಗಿಂತ ಎತ್ತರದಲ್ಲಿದೆ ಚೇಂಬರ್
     ಹಾಲಿ ಮಾಡಲಾದ ಚೇಂಬರ್‍ಗಳು ಬಿಎಸ್ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಿಂತ ಎತ್ತರದಲ್ಲಿವೆ. ಮುಂದೆ ರಸ್ತೆ ಅಭಿವೃದ್ಧಿ ಮಾಡಿದಾಗ ಈ ಚೇಂಬರ್‍ಗಳು ರಸ್ತೆಗೆ ಸಮತಟ್ಟಾಗಿರಬೇಕು. ಆದರೆ ಈಗ ಮಾಡಲಾದ ಚೇಂಬರ್‍ಗಳು ರಸ್ತೆಗಿಂತ 2.5 ಅಡಿಗಳಷ್ಟು ಎತ್ತರದಲ್ಲಿವೆ. ಸ್ಮಾರ್ಟ್ ಸಿಟಿ ಎಂಜಿನಿರ್‍ಗಳ ಮಾಹಿತಿ ಪ್ರಕಾರ ಅವುಗಳನ್ನು ರಸ್ತೆಗೆ ಸಮತಟ್ಟಾಗಿ ಕತ್ತರಿಸಲಾಗುತ್ತದೆ. ಆದರೆ ಅವುಗಳನ್ನು ನಿರ್ಮಾಣ ಮಾಡಿ, ಕತ್ತರಿಸಿರುವುದು ವ್ಯರ್ಥವಲ್ಲವೇ..?
ಬೆಸ್ಕಾಂ ಇಲಾಖೆಯಿಂದ ಆರೋಪ
     ಕಳೆದ ಶನಿವಾರದಂದು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದ ದಿಶಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಸ್ಕಾಂ ಇಲಾಖೆಯವರು ಸ್ಮಾರ್ಟ್ ಸಿಟಿಯಿಂದ ನಿರ್ಮಾಣ ಮಾಡಲಾದ ಚೇಂಬರ್‍ನಲ್ಲಿ ವಿದ್ಯುತ್ ಕೇಬಲ್ ಅನ್ನು ಅಳವಡಿಕೆ ಮಾಡಲು ಮುಂದಾದಾಗ ಹಾಕಲಾಗಿರುವ ಪೈಪ್‍ನಲ್ಲಿ ವಿದ್ಯುತ್ ಕೇಬಲ್ ಒಳಹೋಗದೇ, ಅರ್ಧಕ್ಕೆ ತುಂಡಾಗಿತ್ತು ಎಂಬುದಾಗಿ ಆರೋಪ ಮಾಡಲಾಯಿತು.
ಬೆಸ್ಕಾಂ ಇಲಾಖೆಗೆ ಆಸಕ್ತಿಯಿಲ್ಲ
      ಕಾಮಗಾರಿ ಆರಂಭ ಮಾಡುವ ಮುನ್ನವೇ ಬೆಸ್ಕಾಂ ಇಲಾಖೆಯವರನ್ನು ಸಂಪರ್ಕಿಸಿ ಅವರು ಕೇಳಿದ್ದ ಅಳತೆಯಲ್ಲಿಯೇ ಪೈಪುಗಳನ್ನು ಅಳವಡಿಸಲಾಗಿದೆ. ಆದರೆ ಅವರು ಅಳತೆ ಮೀರಿ ದೊಡ್ಡ ಗಾತ್ರದ ಕೇಬಲ್‍ಗಳನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲು ಮುಂದಾಗಿ ಪೈಪ್‍ನಲ್ಲಿ ಕೇಬಲ್ ಹೋಗುತ್ತಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಚೇಂಬರ್ ನಿರ್ಮಾಣದ ನಂತರ ಬೆಸ್ಕಾಂ ಇಲಾಖೆಯವರು ಟೆಂಡರ್ ಕರೆದು ಕೇಬಲ್ ಅಳವಡಿಕೆ ಕಾಮಗಾರಿ ಮಾಡಿಸಬೇಕು. ಇದೇನು ಮಾಡದೆ ಪ್ರಾಯೋಗಿಕವಾಗಿ ಒಂದನ್ನು ಮಾಡಿ ಅದು ಸರಿಯಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಬೆಸ್ಕಾಂ ಇಲಾಖೆಯವರಿಗೆ ಈ ಕಾಮಗಾರಿಯಲ್ಲಿ ಆಸಕ್ತಿಯಿಲ್ಲ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಆರೋಪ ಸತ್ಯ ಎಂಬಂತೆ ಬೆಸ್ಕಾಂ ಎಂಜಿನಿಯರ್‍ಗೂ ಈ ಕಾಮಗಾರಿಗೂ ನಮಗೂ ಸಂಬಂಧವೇ ಇಲ್ಲ. ಏನಿದ್ದರೂ ಸ್ಮಾರ್ಟ್ ಸಿಟಿಯವರೇ ಮಾಡಿಕೊಳ್ಳಬೇಕು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.                                         
ಬೆಸ್ಕಾಂ ಆರೋಪಕ್ಕೆ ಉತ್ತರ 
      ಬೆಸ್ಕಾಂ ಇಲಾಖೆಯವರು ಚೇಂಬರ್‍ಗಳ ನಡುವೆ ಹಾಕಲಾದ ಪೈಪುಗಳಲ್ಲಿ ವಿದ್ಯುತ್ ಕೇಬಲ್ ಹೋಗುತ್ತಿಲ್ಲ ಎಂದು ಮಾಡಿದ ಆರೋಪಕ್ಕೆ ಪ್ರತ್ಯುತ್ತರವಾಗಿ ಬೆಸ್ಕಾಂ ಇಲಾಖೆಯವರು ನೀಡಲಾದ ಕೇಬಲ್ ಅನ್ನೇ ಕೇವಲ ಆಳುಗಳಿಂದ 70 ಮೀಟರ್‍ವರೆಗೆ ಎಳೆಯುವ ಮೂಲಕ ಬೆಸ್ಕಾಂ ಇಲಾಖೆಯವರ ಆರೋಪಕ್ಕೆ ಸೆಡ್ಡು ಹೊಡೆದಿದ್ದಾರೆ. ಆಳುಗಳಿಂದಲೇ ಕೇಬಲ್‍ಅನ್ನು ಹಾಕುವಾಗ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಕೇಬಲ್‍ಅನ್ನು ಸುಲಭವಾಗಿ ಮಾಡಬಹುದಾಗಿದೆ ಎಂಬುದನ್ನು ಸ್ಮಾರ್ಟ್ ಸಿಟಿ ಎಂಜಿನಿಯರ್‍ಗಳು ಸಾಬೀತು ಪಡಿಸಿದ್ದಾರೆ.
ವ್ಯರ್ಥವಾಗುವುದೇ ಚೇಂಬರ್‍ಗಳಿಗೆ ಖರ್ಚು ಮಾಡಿದ ಹಣ..?
 
    ತುಮಕೂರು ನಗರದಾದ್ಯಂತ ಒಟ್ಟು 1470 ಚೇಂಬರ್‍ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರ ಜೊತೆಗೆ ರಸ್ತೆ ಅಂಚು ಅಭಿವೃದ್ಧಿ, ಚರಂಡಿ ಮಾಡುವುದಕ್ಕಾಗಿ ಒಟ್ಟು 85.61 ಕೋಟಿ ರೂಗಳನ್ನು ಯೋಜಿಸಿದ್ದು, ಇದರಲ್ಲಿ ಚೇಂಬರ್‍ಗಳನ್ನು ಮಾಡಿದಷ್ಟು ಮುಗಿಸಿದರೆ ಉಳಿದ ಹಣ ಯಾವುದಕ್ಕ ಬಳಕೆ ಮಾಡಲಾಗುತ್ತದೆ..? ಈಗ ಮಾಡಲಾದ ಚೇಂಬರ್‍ಗಳು ಬಳಕೆಯಾಗುವುದಿಲ್ಲ ಎಂದಾದರೆ ಈಗ ಮಾಡಲಾದ ಅರ್ಧದಷ್ಟು ಕಾಮಗಾರಿಯಿಂದ ಹಣ ವ್ಯರ್ಥವಾಗುವುದಿಲ್ಲವೇ..?
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿ ಇಲ್ಲ
    ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸುಪರ್ದಿಯಲ್ಲಿರುವ ರಸ್ತೆಯಲ್ಲಿ ಇತರೆ ಇಲಾಖೆಯ ಕಾಮಗಾರಿಗಳನ್ನು ಮಾಡಬೇಕಾದರೆ ಮೊದಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮತಿ ಪಡೆಯಬೇಕು. ಅಲ್ಲದೆ, ಕಾಮಗಾರಿ ಮಾಡಲು ಪಡೆಯುವ ಸ್ಥಳಕ್ಕೆ ನಿರ್ದಿಷ್ಠ ಹಣವನ್ನು ಪಾವತಿಸಬೇಕು. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಕಾಮಗಾರಿ ಮಾಡುತ್ತಿರುವ ಇಲಾಖೆಯವರು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಗಮನ ಹರಿಸಬೇಕು. ಆದರೆ ಹಾಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿಯ ಕಾಮಗಾರಿಗಳಿಗೆ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂಬುದಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಗಳು ತಿಳಿಸುತ್ತವೆ.
      ನಗರದಾದ್ಯಂತ ಚೇಂಬರ್‍ಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ಯಾವುದೇ ಮಾಹಿತಿ ಜನರಿಗೆ ಗೊತ್ತಾಗುತ್ತಿಲ್ಲ. ಈ ಚೇಂಬರ್‍ನೊಳಗೆ ಯಾವ ಪರಿಕರಗಳನ್ನು ಅಳವಡಿಸುತ್ತಾರೆ ಎಂಬುದರ ಬಗ್ಗೆ ಏನೂ ಗೊತ್ತಾಗುತ್ತಿಲ್ಲ. ಕೇವಲ ಚೇಂಬರ್ ತೆಗೆದು ಅದರ ಸುತ್ತಲೂ ಮಣ್ಣನ್ನು ಗುಡ್ಡೆ ಹಾಕಿ ಹೋಗುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರತರವಾದ ತೊಂದರೆಗಳಾಗುತ್ತಿವೆ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ರಮೇಶ್, ಸ್ಥಳೀಯರು

ಚೇಂಬರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ: 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link