ದಾವಣಗೆರೆ:
ಏಪ್ರಿಲ್ 23ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಗುರುವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಒಂದು ಸೆಟ್ ನಾಮಪತ್ರ ಸಲ್ಲಿಸಿದ ಸಂಸದ ಜಿ.ಎಂ.ಸಿದ್ದೇಶ್ವರ್, ನಂತರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರೊಂದಿಗೆ ನಗರ ದೇವತೆ ಶ್ರೀದುರ್ಗಾಂಭಿಕಾ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಜಿಲ್ಲಾಡಳಿತ ಭವನಕ್ಕೆ ತೆರಳಿ ಶಾಸಕರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ ಜೊತೆಗೆ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ಅವರನ್ನು ಭೇಟಿ ಮಾಡಿ ಮತ್ತೊಂದು ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಶ್ರೀದುರ್ಗಾಂಭಿಕಾ ದೇವಸ್ಥಾನದ ಆವರಣದಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಶಾಸಕರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಜಿ.ಕರುಣಾಕರರೆಡ್ಡಿ, ಪ್ರೊ.ಎನ್.ಲಿಂಗಣ್ಣ ಅವರು ಪಾಲ್ಗೊಂಡು ಅಭ್ಯರ್ಥಿ ಸಿದ್ದೇಶ್ವರ್ ಪರವಾಗಿ ಮತಯಾಚಿಸಿದರು.
ಮೆರವಣಿಗೆಯು ನಗರದ ಎಸ್‍ಕೆಪಿ ರಸ್ತೆ, ಗಣಪತಿ ದೇವಸ್ಥಾನ, ದಾನಮ್ಮ ದೇವಿ ದೇವಸ್ಥಾನ ಮಾರ್ಗವಾಗಿ ರಾಜವೀರ ಮದಕರಿ ನಾಯಕ ವೃತ್ತಕ್ಕೆ ಬಂದು ತಲುಪಿದಾಗ ಅಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ದೇಶದ ಜನ ಕಾಂಗ್ರೆಸ್‍ನ್ನು ತಿರಸ್ಕರಿಸಿದ್ದು, ಪ್ರಧಾನಿಯಾಗಬೇಕೆಂಬ ರಾಹುಲ್ ಗಾಂಧಿಯದ್ದು ತಿರುಕನ ಕನಸಾಗಿದೆ. ಈಗಾಗಲೇ ದೇಶವು ಕಾಂಗ್ರೆಸ್ ಮುಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗಲಿದೆ. ಅದಕ್ಕಾಗಿ ಜನತೆ ಬಿಜೆಪಿಯನ್ನ ಬೆಂಬಲಿಸಬೇಕೆಂದು ಮನವಿ ಮಾಡಿದರು.ಕಾಂಗ್ರೆಸ್ಸಿನವರ ಡೈರಿ ಆರೋಪದಲ್ಲಿ ಒಂದೇ ಒಂದು ಸತ್ಯವಿದ್ದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಸುಳ್ಳಾದರೆ ರಾಹುಲ್ ಗಾಂಧಿ ನಿವೃತ್ತಿಯಾಗುತ್ತಾನಾ ಎಂದು ಪ್ರಶ್ನಿಸಿದರು.
ನಂತರ ಯಡಿಯೂರಪ್ಪ, ಮುರುಗೇಶ್ ನಿರಾಣಿ ನಿರ್ಗಮಿಸಿದರೆ, ಕಿತ್ತೂರು ಚೆನ್ನಮ್ಮ ವೃತ್ತದ ಮಾರ್ಗವಾಗಿ ಮುಂದುವರೆದ ಮೆರವಣಿಗೆಯು ರಾಮ್ ಅಂಡ್ ಕೋ ವೃತ್ತ ಸೇರಿ ಮುಕ್ತಾಯವಾಯಿತು.ಈ ಸಂದರ್ಭದಲ್ಲಿ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ ಮಾತನಾಡಿ, ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ. ಆದರೆ, ಬಿಜೆಪಿ ಕಾರ್ಯಕರ್ತರು ಮೈಮರೆಯದೇ ಪ್ರತಿಮನೆಮನೆಗೆ ತೆರಳಿ ಬಿಜೆಪಿ ಸಾಧನೆ, ಮೋದಿ ದೃಢನಿರ್ಧಾರಗಳನ್ನು ತಿಳಿಸುವ ಮುಖೇನಾ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಬೇರೆ ಪಕ್ಷದವರಂತೆ ಚುನಾವಣೆ ಮುನ್ನ 3 ದಿನ ಕತ್ತಲ ರಾತ್ರಿ ನಡೆಸಿ ಚುನಾವಣೆ ಮಾಡುವವರಲ್ಲ. ನಿತ್ಯ ಜನರೊಡಗೂಡಿ ಬೆರೆತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಚುನಾವಣೆ ಎದುರಿಸುತ್ತೇವೆ. ಈ ಬಾರಿಯ ಚುನಾವಣೆ ಅತ್ಯಂತ ಮಹತ್ತರವಾಗಿದ್ದು, ದೇಶಕ್ಕೆ ಆರ್ಥಿಕ, ಸದೃಢ, ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಚುನಾವಣೆಯಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ಮತ್ತೊಮ್ಮೆ ನನ್ನನ್ನು ಗೆಲ್ಲಿಸುವ ಮೂಲಕ ಮೋದಿ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಈ ಬಾರಿಯ ಚುನಾವಣೆ ಯಾವುದೇ ವ್ಯಕ್ತಿ ಪರವಲ್ಲ. ದೇಶಕ್ಕಾಗಿ, ಭಾರತಮಾತೆಯ ಚುನಾವಣೆ. ನಿತ್ಯವೂ ಕ್ಯಾತೆ ಮಾಡುತ್ತಿದ್ದ ಪಾಕಿಸ್ತಾನವನ್ನು ಬಗ್ಗುಬಡಿದು, ಎಚ್ಚರಿಕೆ ಸಂದೇಶ ಸಾರಿದ ಮೋದಿಯ ಚುನಾವಣೆ. ಕಾಂಗ್ರೆಸ್‍ನವರು ಪಾಕಿಸ್ತಾನದಿಂದ ಹೊದೆಸಿಕೊಂಡು ಬದುಕಿದ್ದರು. ಆದರೆ, ವಾಪಾಸ್ ಒದೆಯುವುದು ಹೇಗೆ? ಎಂದು ತೋರಿಸಿಕೊಟ್ಟವರು ಮೋದಿ. ಇಂತಹ ಪ್ರಧಾನಿಯ ಕೈ ಬಲಪಡಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕೆಂದು ಕರೆ ನೀಡಿದರು.
ಶಾಸಕರಾದ ಎಸ್.ಎ. ರವೀಂದ್ರನಾಥ್, ಜಿ. ಕರುಣಾಕರರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಚಿತ್ರದುರ್ಗ ಜಿಲ್ಲೆಯ ಎಚ್. ಚಂದ್ರಣ್ಣ, ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್ ಮಾತನಾಡಿದರು.
ಮಾಜಿ ಶಾಸಕರಾದ ಬಿ.ಪಿ. ಹರೀಶ್, ಬಸವರಾಜ್ ನಾಯ್ಕ, ಮುಖಂಡರಾದ ಎಸ್.ಎಚ್. ನಾಗರಾಜ್, ಜಿಪಂ ಅಧ್ಯಕ್ಷರಾದ ಶೈಲಜಾ ಬಸವರಾಜ್ ಸೇರಿದಂತೆ ಮೆರವಣಿಗೆಯಲ್ಲಿ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







