ತುಮಕೂರು
ಉಪಚುನಾವಣೆ ನಡೆಯುತ್ತಿರುವ ಶಿರಾ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರ ನಿತ್ಯ ಉದಯಿಸುವಷ್ಟೇ ಸತ್ಯ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದರು.
ಶಿರಾ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನಾ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗ್ನೇಯ ಪದವೀಧರ ಕ್ಷೇತ್ರ ಸೇರಿದಂತೆ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಹಾಗೂ ಶಿರಾ ಮತ್ತು ಆರ್.ಆರ್. ನಗರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ವಿಶೇಷವಾಗಿ ಪದವೀಧರ ಕ್ಷೇತ್ರದಲ್ಲಿ ಪ್ರತೀ 10 ಮತದಾರರಿಗೊಬ್ಬರು ಕಾರ್ಯಕರ್ತರನ್ನು ಬಿಜೆಪಿ ನಿಯೋಜಿಸಿದ್ದು, ವ್ಯವಸ್ಥಿತವಾಗಿ ಪ್ರಚಾರ ಕಾರ್ಯ ನಡೆಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿತಂದ ಹಲವು ಜನಪರ ಯೋಜನೆಗಳು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ವರವಾಗಲಿದೆ ಎಂದರು.
ಕಳೆದ ವರ್ಷ ನೆರೆ ಪ್ರವಾಹ ಪೀಡಿತರಿಗೆ ಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಮನೆ ಹಾನಿಯಾದವರಿಗೆ 2 ಲಕ್ಷ ಹಣವನ್ನು ಪುನರ್ವಸತಿಗಾಗಿ ಕಲ್ಪಿಸಿದ್ದು, ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ತೋಟಗಾರಿಕಾ, ಹೂ ಬೆಳೆಗಾರರು, ಅಸಂಘಟಿತ ಕಾರ್ಮಿಕರಿಗೆ ನೆರವಾಗುವ ಕಾರ್ಯ ಮಾಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತೀ ರೈತರಿಗೆ ತಲಾ 6 ಸಾವಿರ ನೆರವು ನೀಡಲಾಗಿದೆ. 20 ಲಕ್ಷ ಹೆಕ್ಟೇರ್ ಗೋವಿನ ಜೋಳ ನಷ್ಟಕ್ಕೊಳಗಾದವರಿಗೆ ಪ್ರತೀ ಹೆಕ್ಟೇರ್‍ಗೆ 5 ಸಾವಿರ ಪರಿಹಾರ ನೀಡಲಾಗಿದೆ ಎಂದರು.
ಬಿಎಸ್‍ವೈ ಅವರೇ ಪೂರ್ಣಾವಧಿ ಸಿಎಂ: ಬಿಎಸ್‍ವೈ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ವೈಯಕ್ತಿಕವಾದುದು. ಬಿ.ಎಸ್.ಯಡಿಯೂರಪ್ಪ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲಿ ಎದುರಿಸಲಾಗುವುದು. ನಾನಂತೂ ಮುಖ್ಯಮಂತ್ರಿ ಸ್ಥಾನಕ್ಕೆ ಯತ್ನಿಸುತ್ತಿಲ್ಲ ಎಂದು ಸವದಿ ಸ್ವಪ್ಟಪಡಿಸಿದರು.
ಸಾರಿಗೆ ನಿಗಮದಿಂದ ಡೀಸಲ್‍ಗಾಗುವಷ್ಟು ಮಾತ್ರ ಆದಾಯ ಸಂಗ್ರಹ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಯಾವುದೇ ಬಸ್‍ಗಳು ಕಾರ್ಯಚರಣೆಗಿಳಿಯದ ಪರಿಣಾಮ ನಾಲ್ಕು ರಸ್ತೆ ಸಾರಿಗೆ ನಿಗಮಗಳು ನಷ್ಟ ಅನುಭವಿಸಿದವು. ಸಂಭಳ ಕೊಡಲು ದುಡ್ಡಿರಲಿಲ್ಲ. ಕಡೆಗೆ ಸರಕಾರದಿಂದ ವೇತನಕ್ಕೆ ಹಣ ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಯಾವ ನೌಕರರಿಗೂ ಒತ್ತಾಯಪೂರ್ವಕ ರಜೆ ಹಾಕಿಸುತ್ತಿಲ್ಲ. ಇನ್ನೂ ವೇತನಕ್ಕೆ ಆಗುವಷ್ಟು ಆದಾಯ ಕೆಎಸ್‍ಆರ್‍ಟಿಸಿ, ಇತರೆ ಸಾರಿಗೆ ನಿಗಮಗಳಿಂದ ಸಂಗ್ರಹವಾಗುತ್ತಿಲ್ಲ. ಡೀಸಲ್‍ಗೆ ಸರಿದೂಗುವಷ್ಟು ಮಾತ್ರ ಆದಾಯ ಬರುತ್ತಿದೆ.
ಖಾಸಗಿ ಪರ್ಮಿಟ್ ಪಡೆದು ವಾಹನ ಓಡಿಸುತ್ತಿದ್ದುವರ ಬದುಕು ದುಸ್ತರವಾಗಿದೆ. ಇದಕ್ಕೆಲ್ಲ ಸರಕಾರಕ್ಕೆ ಬರಬೇಕಾದ ತೆರಿಗೆ ಆದಾಯದಲ್ಲಿ ಖೋತಾ ಆಗಿರುವುದು ಕಾರಣ. ಕೇಂದ್ರದ ಜಿಎಸ್‍ಟಿ ಬಾಕಿ ಹಣ ಬರಲು ವಿಳಂಬವಾಗಿದೆ. ಆ ಹಣ ಬಂದು ಸಂಪನ್ಮೂಲ ಕ್ರೂಢೀಕರಣ ಹೆಚ್ಚಳವಾದರೆ ಪರಿಸ್ಥಿತಿ ಸುಧಾರಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮಸಾಲ ಜಯರಾಂ, ಮಾಜಿ ಸಚಿವರಾದ ಸಿ.ಎಚ್.ವಿಜಯಶಂಕರ್, ಮಾಜಿ ಸಚಿವರು, ಮಾಜಿ ಶಾಸಕರಾದ ಗಂಗಹನುಮಯ್ಯ, ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಬರಗೂರು ಶಿವಕುಮಾರ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ನಗರ ಅಧ್ಯಕ್ಷ ಹನುಮಂತರಾಜು, ಚಂದ್ರಶೇಖರ್, ಸ್ನೇಕ್ ನಂದೀಶ್ ಸೇರಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಜರಿದ್ದರು.
ಶ್ರೀಗಳ ಗದ್ದುಗೆ ದರ್ಶನ: ಸುದ್ದಿಗೋಷ್ಠಿಗೂ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿದ್ದ ಡಿಸಿಎಂ ಲಕ್ಷ್ಮಣ ಸವದಿ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದರಲ್ಲದೆ ಸಿದ್ಧಲಿಂಗಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ