ಬೆಂಗಳೂರು
ವಿದ್ಯುದ್ಮಾನ ಮತಯಂತ್ರಗಳ ಬಗೆಗಿನ ಸಂಶಯ ದೂರ ಮಾಡಲು ರಾಜ್ಯದ ಪ್ರತಿಯೊಬ್ಬ ಮತದಾರನಿಗೂ ಇವಿಎಂ-ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಿ, ಮತದಾರರ ವಿಶ್ವಾಸ ಹೆಚ್ಚಿಸುವ ಗುರಿಯನ್ನು ಚುನಾವಣಾ ಆಯೋಗ ಹಾಕಿಕೊಂಡಿದೆ.
ನಗರದಲ್ಲಿ ಆಯೋಗ ಆಯೋಜಿಸಿದ್ದ, ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಇವಿಎಂ ಮತ್ತು ವಿವಿ ಪ್ಯಾಟ್‍ಗಳ ಕುರಿತು ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಮತದಾರರಲ್ಲಿ ಮತ ಚಲಾವಣೆಯಲ್ಲಿ ಅನುಮಾನ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಹಿಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 3.5 ಕೋಟಿ ಮತದಾರರಿಗೆ ಇವಿಎಂ-ವಿವಿ ಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಈ ಬಾರಿ ಬರೋಬ್ಬರಿ 2.3 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ 5.6 ಕೋಟಿ ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಿ, ಈ ಬಗ್ಗೆ ಜಾಗೃತಿ ಮುಟ್ಟಿಸಲಾಗುವುದು ಎಂದು ತಿಳಿಸಿದರು.
ಇವಿಎಂ ಬಗ್ಗೆ ಆರೋಪ ಕೇಳಿ ಬಂದಿದೆಯಾದರೂ ಅದನ್ನು ಸಾಬೀತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ಉನ್ನತ ಮಟ್ಟದ ತಂತ್ರಜ್ಞರ ಸಮಿತಿ ಪರಿಶೀಲನೆ ಮಾಡಿ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಸಿದ್ಧಪಡಿಸಿದೆ. ಯಾವುದೇ ರೀತಿಯಲ್ಲೂ ಹ್ಯಾಕ್, ಟ್ಯಾಂಪರಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ವಿವಿ ಪ್ಯಾಟ್ ಬಳಕೆಯಿಂದ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಮತದಾನ ಮಾಡಿದ ಕ್ಷಣದಲ್ಲಿ ವೀಕ್ಷಿಸಬಹುದಾಗಿದೆ. ಬ್ಯಾಲೆಟ್ ಯುನಿಟ್‍ನಲ್ಲಿ ಮತಗುಂಡಿ ಒತ್ತಿದ ನಂತರ, ಮತದಾರ, ತಾನು ಮತದಾನ ಮಾಡಿದ ವಿವರ ವಿವಿಪ್ಯಾಟ್‍ನಲ್ಲಿ 7 ಸೆಕೆಂಡ್‍ವರೆಗೆ ಪ್ರದರ್ಶನಗೊಳ್ಳಲಿದೆ.
ಮತ ಚಲಾಯಿಸಿದ ಮತದಾರ ಮಾತ್ರ ವೀಕ್ಷಿಸಲು ಅವಕಾಶವಿರುತ್ತದೆ. ಇದರಿಂದ ಯಾವುದೇ ಗೊಂದಲ, ಸಮಸ್ಯೆ, ಅನುಮಾನ ಮತದಾರನಿಗೆ ಉಳಿಯುವುದಿಲ್ಲ. ತಾನು ಮತಚಲಾಯಿಸಿದ ವ್ಯಕ್ತಿ ಅಥವಾ ಚಿಹ್ನೆಗೆ ಮತದಾನವಾದ ಕುರಿತಂತೆ ಖಾತ್ರಿಪಡಿಸಿ ಮತಗಟ್ಟೆಯ ಕೊಠಡಿಯಿಂದ ತೆರಳಬಹುದಾಗಿದೆ ಎಂದು ವಿವರಿಸಿದರು.
ವಿದ್ಯುನ್ಮಾನ ಮತಯಂತ್ರದ ಬಗ್ಗೆ ಹಾದಿ-ಬೀದಿಯಲ್ಲಿ ಆರೋಪಿಸುವುದು ಸರಿಯಲ್ಲ. ಮತಯಂತ್ರಗಳನ್ನು ಯಾವುದೇ ರೀತಿಯಲ್ಲಿಯೂ ಹ್ಯಾಕ್ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಬಿಗಿ ಭದ್ರತೆ: ಮತಯಂತ್ರಗಳನ್ನು ಅತ್ಯಂತ ಸುರಕ್ಷಿತ ಪೆÇಲೀಸ್ ಭದ್ರತೆ ಜತೆಗೆ ಜಿಪಿಎಸ್ ವ್ಯವಸ್ಥೆ ಇರುವ ವಾಹನದಲ್ಲಿ ಸಾಗಿಸಲಾಗುತ್ತದೆ. ಯಾವ ಯಂತ್ರ ಯಾವ ಲೋಕಸಭಾ ಕ್ಷೇತ್ರದ ಮತಗಟ್ಟೆಗೆ ತಲುಪುತ್ತದೆ ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಹಾಗಾಗಿ ಮತಯಂತ್ರ ಬದಲಾವಣೆ ಮತ್ತು ಬೇರೆ ಯಾವುದೇ ಚಟುವಟಿಕೆ ನಡೆಸುವುದಕ್ಕೆ ಅವಕಾಶವಿರುವುದಿಲ್ಲ ಎಂದರು.ಕಾರ್ಯಾಗಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದರ್ಶಕ ಬೃಂಗೇಶ್, ರಾಜ್ಯ ಚುನಾವಣಾ ಆಯೋಗ ಹೆಚ್ಚುವರಿ ಆಯುಕ್ತ ವೆಂಕಟೇಶ್ ಸೇರಿದಂತೆ ಪ್ರಮುಖರಿದ್ದರು.
ಜಾಗೃತಿ ಅಭಿಯಾನ
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನಗರದ ಆರ್‍ಟಿ ನಗರದ ದಿನ್ನೂರು ಮುಖ್ಯ ರಸ್ತೆಯ ಸರ್ಕಾರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜಾಗೃತಿ ಅಭಿಯಾನಕ್ಕೆ ಚುನಾವಣಾಧಿಕಾರಿ(ಎಆರ್ ಒ) ಡಾ.ಎಂ.ಜಿ.ಶಿವಣ್ಣ ಚಾಲನೆ ನೀಡಿ, ಪ್ರತಿಜ್ಞೆ ವಿಧಿ ಬೋಧಿಸಿದರು .
ಬಳಿಕ ಮಾತನಾಡಿದ ಅವರು, ಪ್ರಜಾ ಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆ ಜೀವಾಳವಾಗಿದೆ ಪ್ರತಿಯೊಬ್ಬ ಅರ್ಹ ಮತದಾರರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಈ ವ್ಯವಸ್ಥೆಯನ್ನು ಸದೃಢಗೊಳಿಸಬೇಕು ಎಂದು ಹೇಳಿದರು.
18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು. ನೈತಿಕ ಮತದಾನದ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುವುದು ಸರಿಯಲ್ಲ. ಮತ ಮಾರಾಟ ಮಾಡಿಕೊಳ್ಳದೆ ಮತದಾನ ಮಾಡಬೇಕು.ಇನ್ನು, ವಿದ್ಯಾವಂತರಿಗೆ ಮತದಾನ ಅರಿವು ಇದ್ದರೂ ಮತದಾನ ಮಾಡುವುದಿಲ್ಲ. ಚುನಾವಣೆ ದಿನದ ರಜೆಯನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳದೆ ಮತದಾನ ಮಾಡಬೇಕು. ಅಮಿಷಗಳಿಗೆ ಬಲಿಯಾಗದೆ ಮತದಾನ ಮಾಡಿ ಎಂದರು.ಈ ಸಂದರ್ಭದಲ್ಲಿ ಪುಲೀಕೇಶಿನಗರದ ಎಸಿ ಸುಹೇಲ್ ಅಹ್ಮದ್, ಕಾಲೇಜಿನ ಪ್ರಾಂಶುಪಾಲೆ ಕೆ.ವನಿತಾ, .ನೌಮಾನ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








