ದಾವಣಗೆರೆ
ಕನಕದಾಸರ ಒಂದೊಂದು ಕೀರ್ತನೆಯೂ ನಮ್ಮಲ್ಲಿ ಸುಜ್ಞಾನದ ಬೆಳಕು ಚೆಲ್ಲಲಿವೆ ಎಂದು ಎವಿಕೆ ಕಾಲೇಜಿನ ಉಪನ್ಯಾಸಕಿ ಗೀತಾ ಬಸವರಾಜ್ ಅಭಿಪ್ರಾಯಪಟ್ಟರು.
ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕುರುಬರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀಕನಕದಾಸರ ಜಯಂತಿಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ವ್ಯಾಸರಾಯರ ಕೂಟದಲ್ಲಿಯೇ ಶ್ರೇಷ್ಠದಾಸರಾಗಿರುವ ಕನಕದಾಸರ ಒಂದೊಂದು ಕೀರ್ತನೆಗಳು, ತತ್ವಗಳು ನಮ್ಮಲ್ಲಿ ಸುಜ್ಞಾನದ ಬೆಳಕು ಚೆಲ್ಲುವುದರ ಮೂಲಕ ಪ್ರತಿಯೊಬ್ಬರಿಗೂ ದಾರಿ ದೀಪವಾಗಲಿವೆ. ಪ್ರಸ್ತುತ ಸಮಾಜದಲ್ಲಿ ಮನುಷ್ಯನ ಮನಸ್ಸು ಮಲೀನವಾಗುತ್ತಿದ್ದು, ಆ ಮಲೀನತೆಯನ್ನು ತೊಳೆಯಬೇಕಾದರೆ ಕನಕ, ಬಸವರ ವಿಚಾರಧಾರೆಗಳು ಅತ್ಯವಶ್ಯವಾಗಿವೆ ಎಂದರು.
ಅಂದೇ ಕನಕದಾಸರು ಅನ್ಯಾಯ, ಅನಿಷ್ಠಗಳನ್ನು ನಮ್ಮ ಜೋಳಿಗೆಗೆ ಹಾಕಿ ಎಂಬುದಾಗಿ ಭಿಕ್ಷೆ ಬೇಡುವ ಮೂಲಕ ಸಮಾಜದಲ್ಲಿ ಮನೆ ಮಾಡಿದ್ದ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಆದರೆ, ಇಂದಿಗೂ ಸಮಾಜದಲ್ಲಿ ಅನ್ಯಾಯ, ತಾರತಮ್ಯ ಮನೆ ಮಾಡಿರುವುದು ಅತ್ಯಂತ ವಿಪರ್ಯಾಸ ಎಂದು ವಿಷಾಧ ವ್ಯಕ್ತಪಡಿಸಿದರು.
ಕನಕದಾಸರು ಇದ್ದ ಕಾಲಘಟ್ಟವೂ ಮಧ್ಯಕಾಲೀನ ಕರ್ನಾಟಕದ ಸಾಂಸ್ಕತಿಕ ಭಾಗವಾಗಿದೆ. ಅವರನ್ನು ತಿಮ್ಮಪ್ಪ, ತಿಮ್ಮಪ್ಪ ನಾಯಕ, ಕನಕ ನಾಯಕ ಹಾಗೂ ಕನಕದಾಸ ಎಂಬ ನಾಲ್ಕು ಆಯಾಮಗಳಲ್ಲಿ ಕೇಂದ್ರೀಕರಿಸಿಕೊಂಡು ನೋಡಿದಾಗ ಕನಕರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಜಾತಿಯೂ ಮೀರಿದ ಜ್ಯೋತಿ ಸ್ವರೂಪರಾಗಿರುವ ಕನಕದಾಸ, ಬಸವಣ್ಣ ಸೇರಿದಂತೆ ಇತರೆ ದಾರ್ಶನಿಕರನ್ನು ಇಂದು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ನಮಗೆ ಅವರ ವಿಚಾರಧಾರೆಯ ಅರಿವು ಮುಖ್ಯವಾಗಬೇಕೆ ಹೊರತು, ಕುಲ ಮುಖ್ಯವಾಗಬಾರದು ಎಂದ ಅವರು, ಕನ್ನಡ ಸಾಹಿತ್ಯ ವಲಯದಲ್ಲಿ ಧೃವತಾರೆಯಾಗಿ ನಿಲ್ಲುವ ಕನಕದಾಸರು ಕೇವಲ ದಾಸ ಮಾತ್ರವಲ್ಲ, ಕವಿ, ದಾರ್ಶನಿಕ, ವಿಮರ್ಷಕರು ಆಗಿದ್ದಾರೆ. ಆ ಕಾರಣಕ್ಕಾಗಿಯೇ ಅವರ ಮೇಲೆ ಸುಮಾರು 150 ಲೇಖನಗಳು, 50ಕ್ಕೂ ಹೆಚ್ಚು ಕೃತಿಗಳು ಬಂದಿರುವುದಲ್ಲದೇ, ಸಂಶೋಧನೆಗಳು ಸಹ ನಡೆಯುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎ.ರವೀಂದ್ರನಾಥ್, ಬಸವಣ್ಣನವರನ್ನು ಲಿಂಗಾಯತರಿಗೆ, ಅಂಬೇಡ್ಕರ್ ಅವರನ್ನು ದಲಿತರಿಗೆ, ವಾಲ್ಮೀಕಿ ಅವರನ್ನು ನಾಯಕರಿಗೆ ಹೀಗೆ ಒಬ್ಬೊಬ್ಬ ದಾರ್ಶನಿಕರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿರುವುದು ನಿಜಕ್ಕೂ ದುರಂತವಾಗಿದೆ. ಇದು ಮೊದಲು ಕೊನೆ ಗಾಣಲಿ ಎಂದು ಆಶಿಸಿದರು.
ಪಾಲಿಕೆ ಮೇಯರ್ ಶೋಭಾ ಪಲ್ಲಾಘಟ್ಟೆ ಮಾತನಾಡಿ, ಕನಕದಾಸರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಯಶಸ್ಸಾಗಿ ಮುನ್ನಡೆಯಲು ಸಾಧ್ಯವಾಗಲಿದೆ. ಇಂತಹ ಶ್ರೇಷ್ಠ ಕನಕದಾಸರ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಬರಬೇಕಾಗಿತ್ತು ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ಕನಕದಾಸರ ಕೀರ್ತನೆಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ, ಅವರ ಜಯಂತಿ ಆಚರಣೆ ಮಾಡಿದಕ್ಕೂ ಅರ್ಥ ಬರಲಿದೆ. ಕನಕದಾಸರು ನುಡಿದಂತೆ ನಡೆದ ಕಾರಣಕ್ಕಾಗಿಯೇ ಇವರು ದಾಸಶ್ರೇಷ್ಠರಾಗಿ ನಮ್ಮ ಮುಂದೆ ನಿಂತಿದ್ದಾರೆ. ಆದರೆ, ಇಂದಿನ ಬಹುತೇಕರಲ್ಲಿ ನುಡಿಯುವುದೇ ಒಂದಾದರೆ, ನಡೆಯೇ ಒಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಾರ್ಶನಿಕರ ಜಯಂತಿಗೆ ಎಲ್ಲಾ ಸಮಾಜಗಳ ಮುಖಂಡರನ್ನು ಆಹ್ವಾನಿಸಬೇಕು. ಆದರೆ, ಕನಕ ಜಯಂತಿಗೆ ಕುರುಬರನ್ನು, ಬಸವ ಜಯಂತಿಗೆ ಲಿಂಗಾಯತರನ್ನು, ಅಂಬೇಡ್ಕರ್ ಜಯಂತಿಗೆ ದಲಿತರನ್ನು ಮಾತ್ರ ಆಹ್ವಾನಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಜಯಂತಿ ಉದ್ಘಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರ ಸಂದೇಶವನ್ನು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಓದಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜೆ.ಸಿ.ನಿಂಗಪ್ಪ, ಪಾಲಿಕೆ ಉಪ ಮೇಯರ್ ಚಮನ್‍ಸಾಬ್, ಸದಸ್ಯ ಹಂಚಿನಮನೆ ತಿಪ್ಪಣ್ಣ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಗಂಗಾಧರ್ ಬಿ.ಎಲ್. ನಿಟ್ಟೂರ್ ನಿರೂಪಿಸಿ, ವಂದಿಸಿದರು. ಸುರಹೊನ್ನೆಯ ಜಿ.ಎಂ.ಚನ್ನರಾಜ್ ಮತ್ತು ತಂಡದ ಸದಸ್ಯರು ಕನಕದಾಸರ ಕೀರ್ತನೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ