ಬೆಂಗಳೂರು
ತೋಟಗಾರಿಕೆ ಬೆಳೆಗಳು, ತೋಟಗಾರಿಕೆಗೆ ಬಳಸುವ ತಂತ್ರಜ್ಞಾನಗಳು ಹಾಗೂ ತೋಟಗಾರಿಕೆ ಉತ್ಪನ್ನಗಳ ಮೇಲೆ ಬೆಳಕು ಚೆಲ್ಲುವ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಬರುವ ಮಂಗಳವಾರ(ಜ. 23ರಿಂದ 25ರವರೆಗೆ ನಾಲ್ಕು ದಿನಗಳ ಹೆಸರುಘಟ್ಟದಲ್ಲಿ ಆಯೋಜಿಸಲಾಗಿದೆ.
ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆಯಲಿರುವ ಮೇಳದಲ್ಲಿ ತೋಟಗಾರಿಕೆಗೆ ಬಳಸುವ ತಂತ್ರಜ್ಞಾನಗಳು ಹಾಗೂ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್. ದಿನೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಧಾರಿತ ತಳಿಗಳ ಮತ್ತು ತಂತ್ರಜ್ಞಾನಗಳ ಪ್ರಾತ್ಯಕ್ಷತೆ ಪ್ರದರ್ಶನ, ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ವಿವಿಧ ಸಂಸ್ಥೆಗಳು, ಕೃಷಿ ವಿವಿಯ ಅಭಿವೃದ್ಧಿ ಇಲಾಖೆ, ಸರ್ಕಾರೇತರ ಸಂಸ್ಥೆ, ಖಾಸಗಿ ಸೇವಾ ಸಂಸ್ಥೆಗಳಿಂದ ವಸ್ತು ಪ್ರದರ್ಶನ, ವಿವಿಧ ತೋಟಗಾರಿಕಾ ಪ್ರಗತಿಯ ಮಾಹಿತಿಗಾಗಿ ಕೃಷಿಕರು, ವಿಜ್ಞಾನಿಗಳು ಮತ್ತು ಸಂಬಂಧಿಸಿದವರೊಂದಿಗೆ ನಿರಂತರ ಸಂವಾದಗಳು, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಖಾಸಗಿ ಉದ್ದಿಮೆದಾರರಿಂದ ಉತ್ತಮ ಗುಣಮಟ್ಟದ ವಿವಿಧ ತಳಿಯ ಸಸ್ಯ, ಬೀಜಗಳ ಮತ್ತು ಪರಿಕರಗಳ ಮಾರಾಟ, ಪ್ರಗತಿಪರ ರೈತರ ನವೀನ ತಂತ್ರಜ್ಞಾನ ಗುರುತಿಸಿ, ಸನ್ಮಾನಿಸಲಾಗುವುದು.
ಮೇಳದ ಅಕರ್ಷಣೆ
ಹಣ್ಣು, ತರಕಾರಿ, ಅಲಂಕಾರಿಕ ಔಷಧಿ, ಸುಗಂಧ ದ್ರವ್ಯ, ಪ್ಲಾಂಟೇಷನ್, ಸಾಂಬಾರು ಬೆಳೆಗಳು ಮತ್ತು ಅಣಬೆ ಬೆಳೆಗಳಿಗೆ ಸಂಬಂಧಿತ ಉತ್ಪಾದನೆ ಮತ್ತು ರಕ್ಷಣೆ ತಂತ್ರಜ್ಞಾನಗಳನ್ನು ಪ್ರದರ್ಶನ ಮಾಡಲಾಗುವುದು. ನರ್ಸರಿ ಸಸ್ಯಗಳನ್ನು ಪೂರೈಸುವುದು, ಸಂರಕ್ಷಿತ ತೋಟಗಾರಿಕೆ ವ್ಯವಸಾಯ, ತೋಟಗಾರಿಕೆ ಆಧಾರಿತ ಮಿಶ್ರ ಕೃಷಿ ಪದ್ಧತಿ, ಕೂಯ್ಲೋತ್ತರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ತೋಟಗಾರಿಕೆಯಲ್ಲಿ ಯಂತ್ರೀಕರಣ ಇನ್ನಿತರ ವಿಶೇಷತೆಗಳನ್ನು ಒಳಗೊಂಡಿರುವುದಾಗಿ ತಿಳಿಸಿದರು.
ತೋಟಗಾರಿಕೆ ಸಂಸ್ಥೆಯ ತಂತ್ರಜ್ಞಾನ ನಿರ್ವಹಣಾ ಘಟಕ ಅರ್ಕಾ ಹೆಸರಿನ ಅಭಿವೃದ್ಧಿ ಪಡಿಸಿದ ಟಮೋಟೋ ತಳಿಯನ್ನು ಬಿಡುಗಡೆ ಮಾಡಿದೆ. ನಾಲ್ಕು ರೋಗಗಳನ್ನು ನಿರೋಧಿಸಬಲ್ಲ ಈ ತಳಿಯಿಂದ ರೈತರಿಗೆ ಅತಿ ಹೆಚ್ಚು ಲಾಭವಾಗುವುದಾಗಿ ತಿಳಿಸಿರುವ ಸಂಸ್ಥೆ 8 ಅಂತಾರಾಷ್ಟ್ರೀಯ ಪೇಟೆಂಟ್ಗಳನ್ನು ಹೊಂದಿದ್ದು ಮುಂಬರುವ ದಿನಗಳಲ್ಲಿ 16 ಪೇಟೆಂಟ್ ಪಡೆಯುವ ಕುರಿತಂತೆ ಪ್ರಕ್ರಿಯೆ ಚಾಲನೆಯಲ್ಲಿದೆ.
400 ಯಶಸ್ವಿ ಉದ್ಯಮಗಳನ್ನು ಸೃಷ್ಟಿಸಿ ತೋಟಗಾರಿಕೆ ತಂತ್ರಜ್ಞಾನಗಳನ್ನು ಮಾರುಕಟ್ಟೆ ಮಾಡುವಲ್ಲಿ ಸಂಸ್ಥೆ ನೆರವಾಗಿದೆ. ಗ್ರಾಮೀಣಾಭಿವೃದ್ಧಿ ಉತ್ತೇಜನಕ್ಕಾಗಿ ಕಳೆದ ಎರಡು ಬಾರಿ ವಿಭಾಗೀಯ ಮಟ್ಟದಲ್ಲಿ ಕೈಗೊಂಡಿದ್ದ ಈ ಮೇಳವನ್ನು ಈ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ವೇದಿಕೆಯಲ್ಲಿ ವಿಭಾಗೀಯ ಮುಖ್ಯಸ್ಥ ಡಾ.ಆರ್. ವೆಂಕಟಕುಮಾರ್, ತರಕಾರಿ ಬೆಳೆ ವಿಭಾಗದ ಮುಖ್ಯಸ್ಥ ಡಾ.ಎ.ಟಿ. ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ