ಮಾನವ- ಆನೆ ಸಂಘರ್ಷ ತಡೆಗೆ ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಬೆಂಗಳೂರು

         ರಾಜ್ಯದಲ್ಲಿ ಆನೆ ದಾಳಿಯಿಂದ ಜನ ಸಾಯದಂತೆ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

          ಇಂದು ಅವರ ಅಧ್ಯಕ್ಷತೆಯಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿಯಿಂದ ತೊಂದರೆಗೊಳಗಾದ ರೈತರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಚರ್ಚಿಸಲು ಸಭೆಯನ್ನು ಏರ್ಪಡಿಸಲಾಗಿತ್ತು.

          ಆನೆಗಳ ಹಾವಳಿಯಿಂದ ಭತ್ತ, ಬಾಳೆ, ಅಡಿಕೆ, ಕಾಫಿ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಮಾನವ – ಆನೆ ಸಂಘರ್ಷ ತಪ್ಪಿಸಲು ವೈಜ್ಞಾನಿಕವಾಗಿ ಪರಿಹಾರವನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು 6000 ಆನೆಗಳು ರಾಜ್ಯದಲ್ಲಿದ್ದು, ಆನೆಗಳ ಹಾವಳಿಯನ್ನು ತಡೆಯಲು ತೊಂದರೆಯುಂಟು ಮಾಡುತ್ತಿರುವ ಆನೆಗಳನ್ನು ಹಿಡಿದು ಶಿಬಿರಗಳಿಗೆ ಕಳುಹಿಸುವುದಕ್ಕೆ ಹೊರ ರಾಜ್ಯಗಳಿಂದ ತಜ್ಞರನ್ನು ಕರೆಸಿಕೊಳ್ಳುವಂತೆ ಸೂಚಿಸಿದರು.

            ಪ್ರಸ್ತುತ, ಆನೆ ಹಾವಳಿ ತಡೆಗೆ ಈವರೆಗೆ 71 ಕಿ.ಮೀ ರೈಲು ತಡೆಗೋಡೆ ನಿರ್ಮಾಣವಾಗಿದ್ದು, ಆಯವ್ಯದಲ್ಲಿ ಮೀಸಲಿಟ್ಟಿರುವ 50 ಕೋಟಿ ರೂ.ಗಳ ಅನುದಾನದಲ್ಲಿ ರಾಜ್ಯದಲ್ಲಿ ಅಗತ್ಯವಿರುವ 400 ರಿಂದ 500 ಕಿ.ಮೀ ತಡೆಗೋಡೆ ನಿರ್ಮಾಣಕ್ಕೆ ಸಾಲದು. ಹಾಗಾಗಿ 3-4 ವರ್ಷಗಳಿಗೆ ಅಗತ್ಯವಿರುವ ಹಣಕಾಸಿನ ನೆರವಿನ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

           ರೈಲ್ವೆ ಇಲಾಖೆಯಿಂದ ಕಂಬಿ ಖರೀದಿ ಬೆಲೆ ದುಬಾರಿಯಾಗಿದ್ದು, ಬೇರೆ ಪ್ರದೇಶಗಳಿಂದ ಕಂಬಿ ಸಾಗಾಣಿಕೆ ಮಾಡಬೇಕಾಗಿರುವುದರಿಂದ ಸಾರಿಗೆ ವೆಚ್ಚವೂ ಸೇರುತ್ತದೆ, ಆದ್ದರಿಂದ ರಿಯಾಯಿತಿ ಬೆಲೆಯಲ್ಲಿ ರೈಲು ಕಂಬಿ ನೀಡುವಂತೆ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲು ಸೂಚಿಸಿದ ಮುಖ್ಯಮಂತ್ರಿಗಳು ರೈಲು ತಡೆಗೋಡೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಪ್ರಸ್ತಾವನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಈ ಕುರಿತು ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವ ಡಾ: ಹರ್ಷವರ್ಧನ್ ಅವರನ್ನು ಭೇಟಿಯಾಗಿ ಸಮಸ್ಯೆಗೆ ನೆರವು ನೀಡಲು ಕೋರುವುದಾಗಿ ಭರವಸೆಯಿತ್ತರು.

           ಸಭೆಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಅರಣ್ಯ ಸಚಿವ ಆರ್. ಶಂಕರ್,ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜರಾಜು, ಶಾಸಕ ಆರಗ ಜ್ಞಾನೇಂದ್ರ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ರೈತರು ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link