ಚಿತ್ರದುರ್ಗ:
ಜನಸಂಖ್ಯೆಗನುಗುಣವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಸಿಗಬೇಕಾಗಿರುವುದರಿಂದ ನಾಯಕ ಸಮಾಜ ಮೊದಲು ಸಂಘಟಿತರಾಗಬೇಕಿದೆ ಎಂದು ಮಾಜಿ ಸಂಸದ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಕರೆ ನೀಡಿದರು.
ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಮತ್ತು ಸಾಂಸ್ಕøತಿಕ ಸಂಘದಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿ ಮಾತನಾಡಿದರು.
ಬಡ್ತಿ ಮೀಸಲಾತಿ ಹಾಗೂ ಶೇ.7.5 ರ ಮೀಸಲಾತಿಯಲ್ಲಿ ನಾಯಕ ಜನಾಂಗಕ್ಕೆ ಅನ್ಯಾಯವಾಗಿದೆ. ನಾಯಕ ಜನಾಂಗದ ಸಾಕಷ್ಟು ಅಧಿಕಾರಿಗಳು ನನ್ನ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅದಕ್ಕಾಗಿ ಒಮ್ಮೆ ಮಠಕ್ಕೆ ಹೋಗಿ ಸ್ವಾಮಿಗಳ ಜೊತೆ ಚರ್ಚಿಸಿ ಜನಾಂಗದ ವಿಚಾರ ಬಂದಾಗ ನನಗೆ ರಾಜಕಾರಣ ಮುಖ್ಯವಲ್ಲ. ನಿಮ್ಮ ಜೊತೆ ಹೋರಾಟದಲ್ಲಿ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ನಾಯಕ ಸಮಾಜ ಒಟ್ಟಾಗಿ ಸಂಘಟಿತರಾಗಬೇಕು. ಸಮಾಜದ ಬಡವರಿಗೆ ಯೋಜನೆಗಳನ್ನು ಮುಟ್ಟಿಸುವ ಕೆಲಸವಾಗಬೇಕು. ನಾಯಕ ಸಮಾಜದ ಮಕ್ಕಳಿಗೆ ಪ್ರತಿಭಾ ಪರುಸ್ಕರಿಸುತ್ತಿರುವುದು ಅತ್ಯುತ್ತಮವಾದ ಕೆಲಸ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ನಾಯಕ ಜನಾಂಗದ ಮಕ್ಕಳು ಬೆಳೆಯಬೇಕು ಎಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ಸಮಾಜದ ಬಗ್ಗೆ ಯೋಚಿಸಬೇಕು. ಜಾತಿ ವ್ಯವಸ್ಥೆಯಲ್ಲಿ ಧೈರ್ಯವಾಗಿ ಯಾರು ಮಾತನಾಡುವಂತಿಲ್ಲ. ರಾಜಕಾರಣಿಗಳು ಸರಿ ಇರುವುದನ್ನು ತಪ್ಪು. ತಪ್ಪಾಗಿರುವುದನ್ನು ಸರಿ ಎನ್ನುವುದು ಸಹಜ. ಸರ್ಕಾರಿ ನೌಕರರು ಕೆಲವೊಂದು ನಿಯಮದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ನಾಯಕ ಜನಾಂಗದ ಮಕ್ಕಳಿಗೆ ಸಹಾಯ ಮಾಡಿ ನಾಯಕ ಜನಾಂಗ ದೊರೆಯಾಗಿ ಆಳ್ವಿಕೆ ನಡೆಸಿದೆ. ಆದಿಕವಿ ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದಿದ್ದಾರೆ. ಆದರೂ ಜನಾಂಗ ಕಷ್ಟದಲ್ಲಿದೆ. ನಾಯಕ ಜನಾಂಗದ ಹದಿನೈದು ಮಂದಿ ಶಾಕರಿದ್ದೇವೆ.
ಬಡ್ತಿ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ನಾಯಕ ಜನಾಂಗದ ಅಧಿಕಾರಿಗಳು ನನ್ನ ಬಳಿ ಬಂದು ಹೇಳಿಕೊಳ್ಳಲು ಮತ್ತೊಬ್ಬರಿಗೆ ಅಂಜುವಂತಾಗಿದೆ. ಹಿಂಬಡ್ತಿಯಿಂದ ನಾಯಕ ಜನಾಂದ ಹದಿನೈದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಬೇರೆ ಸಮಾಜದವರು ಆತ್ಮಹತ್ಯೆಮಾಡಿಕೊಂಡಿದ್ದರೆ ಸುಮ್ಮನಿರುತ್ತಿದ್ದರೆ. ರಾಷ್ಟ್ರಪತಿಗಳು ಸಹಿ ಹಾಕಿದ್ದರೂ ರಾಜ್ಯ ಸರ್ಕಾರ ಏಕೆ ಕೊಡುತ್ತಿಲ್ಲ. ಸದನದಲ್ಲಿ ಪ್ರಶ್ನಿಸುತ್ತೇವೆ ಎಂದು ತಿಳಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ನಾಯಕ ಜನಾಂಗದ ನೌಕರರು ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ನಿಜವಾಗಿಯೂ ಪ್ರತಿಭಾವಂತ ಮಕ್ಕಳಿಗೆ ಉತ್ತೇಜನ ನೀಡಿದಂತಾಗಿದೆ. ಕಷ್ಟದಲ್ಲಿರುವ ಎಷ್ಟೋ ಮಂದಿ ಸಾಧನೆಗಳನ್ನು ಮಾಡಿದ್ದಾರೆ. ಕೆಲವರು ಅಧಿಕಾರಕ್ಕೆ ಹೋದ ಮೆಲೆ ಹಿಂದಿನದನ್ನು ಮರೆತುಬಿಡುತ್ತಾರೆ. ಸಂಘಟನೆ ಹೋರಾಟದ ಮೂಲಕ ಮೀಸಲಾತಿಯನ್ನು ಪಡೆಯಿರಿ ಎಂದು ನಾಯಕ ಜನಾಂಗಕ್ಕೆ ಕಿವಿಮಾತು ಹೇಳಿದರು.
ಎಲ್.ಜಿ.ಹಾವನೂರ್ರವರು ಕೇವಲ ನಾಯಕ ಜನಾಂಗಕ್ಕೆ ಮಾತ್ರ ಅನುಕೂಲ ಕಲ್ಪಿಸಿಲ್ಲ. ಸಮಾಜದ ಕಟ್ಟ ಕಡೆಯ ಜನಾಂಗವನ್ನು ಗುರುತಿಸಿರುವುದರಿಂದಲೆ ಈಗ ಅಲ್ಪಸ್ವಲ್ಪ ಮೀಸಲಾತಿ ಸಿಗುತ್ತಿದೆ. ಡಿ.ದೇವರಾಜ ಅರಸುರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ದಿಟ್ಟ ನಿರ್ಧಾರವನ್ನು ಕೈಗೊಂಡು ಎಲ್.ಜಿ.ಹಾವನೂರು ವರದಿಯನ್ನು ನೇಮಿಸಿದರು ಎಂದು ಸ್ಮರಿಸಿಕೊಂಡರು.
ನಾಯಕ ಜನಾಂಗದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯಬೇಕಾದರೆ ಐ.ಎ.ಎಸ್., ಕೆ.ಎ.ಎಸ್. ತರಬೇತಿ ಕೇಂದ್ರಗಳನ್ನು ತೆರೆಯುವಂತೆ ನಾಯಕ ಜನಾಂಗದ ನೌಕರರಿಗೆ ಸಲಹೆ ನೀಡಿದರು.
ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವೇ ಮೆಚ್ಚುವಂತ ರಾಮಾಯಣವನ್ನು ಬರೆದಿದ್ದಾರೆ. ವಾಲ್ಮೀಕಿ ಸಮುದಾಯ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕಾಗಿ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಅರ್ಥಪೂರ್ಣವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಯಕ ಜನಾಂಗದ ಜನಸಂಖ್ಯೆಗನುಗುಣವಾಗಿ ಶೇ.7.5 ರ ಮೀಸಲಾತಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಈಗಲೂ ಒತ್ತಾಯಿಸುತ್ತೇನೆ. ಹುಟ್ಟಿನಿಂದ ಯಾವ ಜಾತಿಯನ್ನು ಗುರುತಿಸಬಾರದು. ನಡತೆ, ವೈಚಾರಿಕತೆ, ದೈನಂದಿನ ಬದುಕಿನಿಂದ ಜಾತಿಯನ್ನು ತೋರಿಸಬೇಕಿದೆ.ಮೇಲ್ವರ್ಗದವರನ್ನು ಯಾರು ದ್ವೇಷಿಸಬಾರದು. ಅವರ ಸಹಾಯ ಸಹಕಾರ ಪಡೆದುಕೊಂಡು ಜೀವನದಲ್ಲಿ ಎತ್ತರಕ್ಕೆ ಬೆಳೆಯಿರಿ ಎಂದು ನಾಯಕ ಜನಾಂಗದರಿಗೆ ಹೇಳಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡುತ್ತ ನಾಯಕ ಸಮಾಜಕ್ಕೆ ಎಲ್ಲಿ ಯಾವಾಗ ನ್ಯಾಯ ಒದಗಿಸಬೇಕು. ಅಲ್ಲಿ ಪ್ರಾಮಾಣಿಕವಾಗಿ ಒದಗಿಸುತ್ತೇನೆ. ನಾಯಕ ಜನಾಂಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕಾದರೆ ಪಕ್ಷ ಬೇದ ಮರೆತು ನಾಯಕ ಜನಾಂಗದ ಎಲ್ಲಾ ಶಾಸಕರು ಒಂದಾಗುತ್ತೇವೆ. ಫೆ.8 ಮತ್ತು 9 ರಂದು ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ರಾಜ್ಯದ ಎಲ್ಲಾ ನಾಯಕ ಸಮಾಜದವರು ಪಾಲ್ಗೊಂಡು ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸುವಂತೆ ಮನವಿ ಮಾಡಿದರು.
ಸಮಾಜದ ಪ್ರತಿಭೆಗಳು ಬೆಳಕಿಗೆ ಬರಬೇಕಾದರೆ ಪ್ರತಿಭಾ ಪರುಸ್ಕಾರದಂತ ಕಾರ್ಯಕ್ರಮಗಳು ಮುಖ್ಯ. ಜೀವನದಲ್ಲಿ ಎತ್ತರಕ್ಕೆ ಹೋದಾಗ ಸ್ವಾರ್ಥಿಗಳಾಗಬೇಡಿ. ಸಮಾಜದ ಋಣ ತೀರಿಸಿ. ತ್ಯಾಗ ಗುಣಗಳನ್ನು ಬೆಳೆಸಿಕೊಳ್ಳಿ. ಕೇವಲ ನೀವು ಮತ್ತು ನಿಮ್ಮ ಕುಟುಂಬಕ್ಕಷ್ಟೆ ಮೀಸಲಾಗಿರಬೇಡಿ. ಸಮಾಜದ ದುರ್ಬಲರ ಕಡೆಯೂ ಗಮನ ಕೊಡಿ. ಸರ್ಕಾರ ಯಾವುದೇ ಇರಲಿ ಜನಾಂಗದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕಿದೆ ಎಂದರು.
ಪ್ರತಿಭಾ ಪರುಸ್ಕಾರದ ಸಾನಿಧ್ಯ ವಹಿಸಿದ್ದ ರಾಜನಹಳ್ಳಿ ಮಠದ ಪ್ರಸನ್ನಾನಂದಸ್ವಾಮೀಜಿ ಆಶೀರ್ವಚನ ನೀಡುತ್ತ ರಾಮ ರಾಮ ಎಂದು ಕೂಗುವವರು ಅಯೋಧ್ಯೆಯಲ್ಲಿ ಮೊದಲು ವಾಲ್ಮೀಕಿ ಗುಡಿಯನ್ನು ಕಟ್ಟಿ ಪೂಜಿಸಿ. ರಾಮಾಯಣವನ್ನು ಬರೆದು ವಿಶ್ವಕ್ಕೆ ನೀಡಿರುವ ಆದಿಕವಿ ವಾಲ್ಮೀಕಿ ಮಹರ್ಷಿ ಗುಡಿಯನ್ನು ಅಯೋಧ್ಯೆಯಲ್ಲಿ ರಾಮನ ಪಕ್ಕ ನಿರ್ಮಿಸಿ ಗೌರವಿಸುವ ಕೆಲಸವಾಗಬೇಕು. ಶಿಕ್ಷಣ ವ್ಯವಸ್ಥೆಯನ್ನು ದ್ರೋಣಾಚಾರ್ಯರು ಅಂದಿನ ಕಾಲದಲ್ಲಿಯೇ ಒದಗಿಸಿದ್ದರು. ಆಗ ಏಕಲವ್ಯ ದ್ರೋಣಾಚಾರ್ಯರಿಗೆ ಹೆಬ್ಬೆರಳನ್ನೆ ಕತ್ತರಿಸಿ ಗುರುಕಾಣಿಕೆಯಾಗಿ ನೀಡಿದ. ಆಗ ಏಕಲವ್ಯನನ್ನು ಸನ್ಮಾನಿಸಬೇಕಿತ್ತು. ಅಂತಹ ಕೆಲಸವನ್ನು ಇಂದು ನಾಯಕ ಸಮಾಜದ ನೌಕರರು ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಗುಣಗಾನ ಮಾಡಿದರು.
ನಾಯಕ ಜನಾಂಗದ ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಸುಸಂಸ್ಖತರಾಗಬೇಕಿದೆ. ಹಿಂಬಡ್ತಿಯಿಂದ ನಾಯಕ ಜನಾಂಗಕ್ಕೆ ದೊಡ್ಡ ಆಘಾತವಾಗಿದೆ. ರಾಷ್ಟ್ರಪತಿಗಳು ಬಡ್ತಿಗೆ ಅಂಕಿತ ಹಾಕಿದ್ದರೂ ರಾಜ್ಯ ಸರ್ಕಾರ ಏಕೆ ಹಿಂಬಡ್ತಿಗೊಳಿಸಿದೆ. ಯಾವುದೇ ಕಾರಣಕ್ಕೂ ಹಿಂಬಡ್ತಿಗೊಳಿಸಬಾರದು. ಮುಂಬಡ್ತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಮತ್ತು ಸಾಂಸ್ಕತಿಕ ಸಂಘದ ಅಧ್ಯಕ್ಷ ಗುಡದೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೌರವಾಧ್ಯಕ್ಷ ಡಾ.ಎನ್.ಬಿ.ಪ್ರಹ್ಲಾದ್, ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ತಾಲೂಕು ವೈದ್ಯಾಧಿಕಾರಿ ಡಾ.ಪಾಲಾಕ್ಷ, ಪ್ರಸನ್ನಕುಮಾರ್, ನಗರಸಭೆ ಸದಸ್ಯರುಗಳಾದ ವೆಂಕಟೇಶ್, ದೀಪು, ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೆ.ಪಿ.ಮದುಸೂಧನ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಸುಧಾಕರ್, ಕಾರ್ಯಪಾಲಕ ಆಭಿಯಂತರ ಹನುಮಂತಪ್ಪ ಡಿ.ಎಸ್.ಪಿ.ಗಳಾದ ವೆಂಕಟಪ್ಪನಾಯಕ, ತಿಪ್ಪೇಸ್ವಾಮಿ, ಜಿ.ಬಿ.ಶ್ರೀನಿವಾಸ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
