ಸಂಭ್ರಮದ ಈದ್ ಮಿಲಾದ್, ಬೃಹತ್ ಮೆರವಣಿಗೆ

ದಾವಣಗೆರೆ :

         ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹಮದ್ ಪೈಗಂಬರ್ ಅವರ ಜನ್ಮ ದಿನದ ಸಂಕೇತವಾಗಿರುವ ಈದ್‍ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಜಿಲ್ಲಾದ್ಯಂತ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.

        ಈದ್‍ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜ ಬಾಂಧವರ ಪವಿತ್ರ ಯಾತ್ರ ಸ್ಥಳವಾಗಿರುವ ಮೆಕ್ಕಾ-ಮದೀನಾಕ್ಕೆ ಹೋಲುವ ರೀತಿಯ ಸ್ತಬ್ಧ ಚಿತ್ರಗಳನ್ನು ರಚಿಸಿ, ಕಣ್ಣು ತುಂಬಿಕೊಂಡರು. ಅಲ್ಲದೆ, ಹಬ್ಬದ ಪ್ರಯುಕ್ತ ಹೊಸ ಬಟ್ಟೆ ತೊಟ್ಟು, ಪರಸ್ಪರ ಈದ್‍ಮಿಲಾದ್ ಶುಭಾಶಯವನ್ನು ವಿನಿಮಯಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಬಗೆ, ಬಗೆಯ ಭಕ್ಷ್ಯ ಸವಿದು ಸಂಭ್ರಮಿಸಿದರು.
ಇಲ್ಲಿನ ಆಜಾದ್ ನಗರ ವೃತ್ತದಲ್ಲಿ ಫಾತೇಹಖಾನಿ ಓದಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಚಾಲನೆ ನೀಡಿದರು.

        ಮೆರವಣಿಗೆಯ ಮಾರ್ಗ ಮಧ್ಯೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿಂದೂಪರ ಸಂಘಟನೆಗಳ ಮುಖಂಡರಾದ ಕೆ . ಬಿ. ಶಂಕರ ನಾರಾಯಣ , ವೈ.ಮಲ್ಲೇಶ್, ದೇವರಮನಿ ಶಿವಕುಮಾರ್ ಮತ್ತಿತರರು ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು.

        ಆಜಾದ್ ನಗರ ವೃತ್ತದಿಂದ ಹೊರಟ ಮೆರವಣಿಗೆಯು ಅಹ್ಮದ್ ನಗರ, ಚಾಮರಾಜ ಪೇಟೆ, ಮಂಡಿಪೇಟೆ, ವಿಜಯಲಕ್ಷ್ಮೀ ರಸ್ತೆ, ಬಾರ್‍ಲೈನ್ ರಸ್ತೆ, ಅರುಣಾ ಟಾಕೀಸ್ ಎದುರಿನ ಪಿಬಿ ರಸ್ತೆಯ ಮೂಲಕ ಮಹಾತ್ಮ ಗಾಂಧೀ ವೃತ್ತಕ್ಕೆ ತೆರಳಿತು. ಅದೇವೇಳೆಗೆ ಕೆಟಿಜೆ ನಗರ, ಭಾರತ್ ಕಾಲೋನಿಯಿಂದ ಬಂದ ಮೆರವಣಿಗೆಗಳು ಬೃಹತ್ ಮೆರವಣಿಗೆಯೊಂದಿಗೆ ಸಮಾಗಮಾಗೊಂಡವು. ನಂತರ ಅಶೋಕ ರಸ್ತೆ, ಕೆ.ಆರ್.ರಸ್ತೆಯ ಮೂಲಕ ಮಾಗಾನಹಳ್ಳಿ ರಸ್ತೆಯಲ್ಲಿರುವ ಮಹಮ್ಮದ್ ಅಲಿ ಜೋಹಾರ್ ನಗರದಲ್ಲಿರುವ ಈದ್ ಮಿಲಾದ್ ಮೈದಾನ ಸೇರಿ ಮೆರವಣಿಗೆ ಮುಕ್ತಾಯವಾಯಿತು. ಬಳಿಕ ಇಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಇಸ್ಲಾಂ ಧರ್ಮಗುರುಗಳು ಭಾಷಣ ಮಾಡಿದರು.

          ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಬಿಳಿ ಬಣ್ಣದ ಕುರ್ತಾ ಧರಿಸಿ, ಕೈಯಲ್ಲಿ ಹಸಿರು ಝಂಡಾ ಹಿಡಿದು, ಬೀಸುತ್ತಾ, ಮುಸ್ಲಿಂ ಧರ್ಮದ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಚಿಣ್ಣರು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ವೇಷ ಧರಿಸಿ ಗಮನ ಸೆಳೆದರೆ, ಮೆಕ್ಕಾ ಮತ್ತು ಮದಿನಾದ ಸ್ತಬ್ಧ ಚಿತ್ರ ನೋಡುಗರ ಕಣ್ಮನ ಸೆಳೆಯುತ್ತಿತ್ತು.

          ಮೆರಣಿಗೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬಂದೋಬಸ್ತ್‍ಗಾಗಿ ಸಾವಿರಕ್ಕೂ ಅಧಿಕ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

          ಮೆರವಣಿಗೆಯಲ್ಲಿ ಮಿಲಾದ್ ಕಮಿಟಿಯ ಅಧ್ಯಕ್ಷ ಕೆ.ಅತಾವುಲ್ಲಾ ರಜ್ವಿ, ತಂಜಿಮಿಲ್ ಕಮಿಟಿಯ ಅಧ್ಯಕ್ಷ ಸಾಧಿಕ್ ಪೈಲ್ವಾನ್, ಉಪಾಧ್ಯಕ್ಷ ಎ.ಬಿ.ಜಬೀವುಲ್ಲಾ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಿಲ್ಲತ್ ವಿದ್ಯಾಸಂಸ್ಥೆಯ ಸೈಯದ್ ಸೈಫುಲ್ಲಾ, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಸ್ಲಿಂ ಸಮಾಜದ ಮುಖಂಡರುಗಳಾದ ಯಾಸೀನ್ ಪೀರ್ ರಜ್ವಿ, ಡಿ.ಅಸ್ಲಾಂ ಖಾನ್, ಸೈಯದ್ ಶಾಹಿನ್, ಎಸ್.ಎಂ.ಗೌಸ್, ಸೈಯದ್ ಷಫಿವುಲ್ಲಾ, ಸಿರಾಜ್ ಅಹ್ಮದ್, ಎ.ಬಿ.ರಹೀಂ ಸಾಬ್, ಸೈಯದ್ ಚಾರ್ಲಿ, ಜೆ.ಅಮಾನುಲ್ಲಾ ಖಾನ್, ಎಸ್.ಬಿ.ಮೆಹಬೂಬ್ ಸಾಬ್, ಕೆ.ಮೊಹಿದ್ದೀನ್ ಸಾಬ್, ಅಬ್ದುಲ್ ಬಾರಿ, ಕೋಳಿ ಇಬ್ರಾಹಿಂ, ಮಹಮ್ಮದ್ ಅಸ್ಲಾಂ, ಅಬ್ದುಲ್ ಲತೀಫ್, ಮೌಲಾಸಾಬ್, ಟಾರ್ಗೇಟ್ ಅಸ್ಲಾಂ, ಅಲ್ತಾಫ್ ಹುಸೇನ್, ಗುತ್ತಿ ಗೌಸ್, ಜಬೀವುಲ್ಲಾ, ನಾಸೀರ್, ಅಯಾಜ್ ಹುಸೇನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap