ಹುಳಿಯಾರು
ಕೆಲಸದ ವೇಳೆ ಬೆಸ್ಕಾಂ ನೌಕರರು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ಸುರಕ್ಷತಾ ನಿಯಮವನ್ನು ಸೂಚನೆಗಳನ್ನು ನಿರ್ಲಕ್ಷಿಸದೆ ಪಾಲಿಸಿದಲ್ಲಿ ವಿದ್ಯುತ್ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಬೆಸ್ಕಾಂ ಸಹಾಯಕ ಇಂಜಿನಿಯರ್ ಹಾಗೂ ಶಾಖಾಧಿಕಾರಿ ಉಮೇಶ್ ನಾಯಕ್ ತಿಳಿಸಿದರು.
ಹುಳಿಯಾರಿನ ಬೆಸ್ಕಾಂ ಕಚೇರಿಯಲ್ಲಿ ನೌಕರರಿಗೆ ವಿದ್ಯುತ್ ಸುರಕ್ಷತೆ ಬಗ್ಗೆ ಅರಿವು ಹಾಗೂ ಸುರಕ್ಷಾ ಮಂತ್ರ ಬೋಧಿಸಿ ಮಾತನಾಡಿದ ಅವರು, ಬೆಸ್ಕಾಂ ನೌಕರರು ಸದಾ ವಿದ್ಯುತ್‍ನೊಂದಿಗೆ ಕೆಲಸ ಮಾಡಬೇಕಾಗಿರುವುದರಿಂದ ಪ್ರತಿಕ್ಷಣವೂ ಕೂಡ ಎಚ್ಚರ ವಹಿಸುವುದು ಬಲು ಮುಖ್ಯ. ಸ್ವಲ್ಪವೇ ನಿರ್ಲಕ್ಷ್ಯ ವಹಿಸಿದರೆ ಸಾಕು ಜೀವಕ್ಕೆ ಸಂಚಕಾರ ತರುವ ಸಂದರ್ಭಗಳೇ ಹೆಚ್ಚಿದ್ದು ಜೀವಹಾನಿ ಮತ್ತು ಇಲಾಖೆಗೆ ಆರ್ಥಿಕ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಸುರಕ್ಷತಾ ನಿಯಮಗಳನ್ನು ಅನುಸರಿಸುವುದು ಅವಶ್ಯ ಎಂದರು.
ನೌಕರರು ಕಂಬ ಹತ್ತುವ ವೇಳೆ, ವಿದ್ಯುತ್ ಸಂಪರ್ಕ ನೀಡುವ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಹಾಗೂ ಸೂಕ್ತ ಉಪಕರಣಗಳನ್ನು ಬಳಸಬೇಕು. ಕೆಲಸದ ವೇಳೆ ಪ್ರತಿಯೊಬ್ಬರು ಜಾಗ್ರತೆಯಿಂದ ಇರಬೇಕು ಹಾಗೂ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬೆಸ್ಕಾಂನ ಸಹಾಯಕ ಎಂಜಿನಿಯರ್ ಹೆಚ್.ಜಿ.ಮೂರ್ತಿ ಮಾತನಾಡಿ, ಬೆಸ್ಕಾಂ ತಮ್ಮ ನೌಕರರಿಗೆ ಸುರಕ್ಷತೆ ಬಗ್ಗೆ ಪ್ರಥಮ ಆದ್ಯತೆ ನೀಡುತ್ತಿದೆ. ವಿದ್ಯುಚ್ಛಕ್ತಿ ಸುರಕ್ಷತೆ, ವಿದ್ಯುತ್ ಉಳಿತಾಯದ ಬಗ್ಗೆ ನೌಕರರಲ್ಲಿ ಅರಿವು ಮೂಡಿಸಲು ಬೆಸ್ಕಾಂ ಪ್ರತಿ ಸೋಮವಾರ ಸುರಕ್ಷತೆ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಮಯದಲ್ಲಿ ನೌಕರರಿಗೆ ವಿದ್ಯುತ್ ಸುರಕ್ಷತೆ ಹಾಗೂ ಉಪಕರಣಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು. ಬೆಸ್ಕಾಂನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕೆಲಸ ನಿರ್ವಹಿಸಿ ತಮ್ಮ ಅಮೂಲ್ಯವಾದ ಜೀವನವನ್ನು ರಕ್ಷಣೆ ಮಾಡಿಕೊಳ್ಳುವಂತೆ ಹೇಳಿದರು.
ಬೆಸ್ಕಾಂನ ಹಿರಿಯ ಸಹಾಯಕ ಕೆ.ಪಿ.ಮಂಜುನಾಥ್ ಮಾತನಾಡಿ, ಹುಳಿಯಾರು ಶಾಖೆಯಲ್ಲಿ ಮೊದಲಿನಿಂದಲೂ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿತ್ತು. ಸುರಕ್ಷತಾ ಕ್ರಮವನ್ನು ಅನುಸರಿಸುತ್ತಿರುವುದರಿಂದ ಯಾವುದೇ ಅವಘಡಗಳು ಸಂಭವಿಸಿಲ್ಲ. ಬೆಸ್ಕಾಂ ವತಿಯಿಂದ ಶೀಘ್ರದಲ್ಲೇ ವಿದ್ಯುತ್ ಬಳಕೆ ಬಗ್ಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.
ಕೆಲಸದ ಸಮಯದಲ್ಲಿ, ಕಂಬ ಹತ್ತುವ ಸಮಯದಲ್ಲಿ, ಮಾರ್ಗ ಮುಕ್ತತೆ ತೆಗೆದುಕೊಳ್ಳುವ ಸಮಯದಲ್ಲಿ, ವಿದ್ಯುತ್ ತಂತಿ ಅಳವಡಿಸುವ ವೇಳೆಯಲ್ಲಿ ಸೂಕ್ತ ಉಪಕರಣಗಳನ್ನು ಬಳಸುವಂತೆ ಸುರಕ್ಷತಾ ಮಂತ್ರ ಬೋಧಿಸಲಾಯಿತು.ಈ ಸಂದರ್ಭದಲ್ಲಿ ಬೆಸ್ಕಾಂ ನೌಕರರ ಸಂಘದ ಗಂಗಯ್ಯ, ಜಗದೀಶ್, ಮಲ್ಲಿಕಾರ್ಜುನ ಸೇರಿದಂತೆ ನೌಕರರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ