ಕನಕ ಜಯಂತಿ ಆಚರಣೆಗೆ ಸಿದ್ಧತೆ ನಡೆಸಿ: ಡಿಸಿ

ದಾವಣಗೆರೆ :

       ಇದೇ ನ.26ರಂದು ದಾಸಶ್ರೇಷ್ಠ ಕನಕ ಜಯಂತಿ ಆಚರಣೆಗೆ ಬೇಕಾದ ಸಕಲ ಸಿದ್ಧತೆಯನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕನಕದಾಸರ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚರ್ಚಿಸಲು ಅಧಿಕಾರಿಗಳು ಹಾಗೂ ಕುರುಬ ಸಮಾಜದ ಮುಖಂಡರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಕನಕ ಜಯಂತಿಯನ್ನು ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಸಲಾಗುವುದು. ಕನ್ನಡ ಸಂಸ್ಕತಿ ಇಲಾಖೆ ವತಿಯಿಂದ ವೇದಿಕೆ ನಿರ್ಮಾಣ ಮಾಡುವುದರ ಜೊತೆಗೆ ನಗರದ ಮುಖ್ಯ ಭಾಗಗಳಲ್ಲಿ ಜಯಂತಿ ಕುರಿತ ಫ್ಲೆಕ್ಸ್ ಅಳವಡಿಕೆ ಮಾಡುವುದರ ಜೊತೆಗೆ ಸಮಾಜದ ವತಿಯಿಂದ ನಡೆಸುವ ಮೆರವಣಿಗೆಗೆ ಕಲಾತಂಡಗಳನ್ನು ನೀಡಲಾಗುವುದು ಎಂದರು.

       ಸಮಾಜದ ಮುಖಂಡ ಪಿ.ರಾಜಕುಮಾರ್ ಸೇರಿದಂತೆ ಮತ್ತಿತರರು ಮಾತನಾಡಿ, ಈ ಬಾರಿಯ ಕನಕ ಜಯಂತಿಯ ವಿಶೇಷ ಉಪನ್ಯಾಸಕರನ್ನಾಗಿ ಹಂಪಿ ವಿವಿಯ ಉಪ ಕುಲಪತಿ ಮಲ್ಲಿಕಾ ಘಂಟಿ ಅಥವಾ ಕನಕದಾಸರ ಕುರಿತು ಅಧ್ಯಯನ ಮಾಡಿದವರನ್ನು ಕರೆಸಬೇಕೆಂದು ಸಲಹೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಪ್ರತಿಕ್ರಯಿಸಿ, ಕನಕದಾಸರ ಕುರಿತು ಮಾತನಾಡುವ ಸೂಕ್ತ ಉಪನ್ಯಾಸಕರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

       ಸಮಾಜದ ಮುಖಂಡ ಗೋಣೆಪ್ಪ ಮಾತನಾಡಿ, ನ.26 ರ ನಂತರ ಸಮಾಜದ ವತಿಯಿಂದ ಪ್ರತ್ಯೇಕವಾಗಿ ಇನ್ನೊಮ್ಮೆ ಜಯಂತಿ ಆಚರಣೆ ಮಾಡಲಾಗುವುದು. ಅದಕ್ಕೆ ಕಲಾತಂಡಗಳನ್ನು ಒದಗಿಸುವಂತೆ ಮನವಿ ಮಾಡಿದರು.

         ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕ ಗೋವಿಂದಪ್ಪ ಮಾತನಾಡಿ, ಡಯಟ್ ವತಿಯಿಂದ ಅ.5 ರಂದು ಜಿಲ್ಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕನಕದಾಸರ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಅದರಲ್ಲಿ ವಿಜೇತರಾದ ಮೂರು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ರೂ. 5 ಸಾವಿರ, ಎರಡನೇ ಬಹುಮಾನ ರೂ.4 ಸಾವಿರ ಮತ್ತು ಮೂರನೇ ಬಹುಮಾನ ರೂ. 3 ಸಾವಿರ ನಗದು ಮತ್ತು ಪ್ರಶಸ್ತಿಯನ್ನು ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಹೇಳಿದರು.

         ಜಿಲ್ಲಾ ಕುರುಬ ಸಮಾಜದ ಕಾರ್ಯದರ್ಶಿ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಎರಡು ವರ್ಷಗಳ ಹಿಂದೆ ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಕನಕದಾಸ ಭಾವಚಿತ್ರ ಬಿಡಿಸುವ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಳೆದ ಬಾರಿ ಮತ್ತು ಈ ಬಾರಿ ತಡವಾಗಿ ಸಭೆ ಕರೆದ ಕಾರಣ ಈ ಸ್ಪರ್ಧೆ ಏರ್ಪಡಿಸಲಾಗಿಲ್ಲ ಎಂದರು.

         ಈ ವೇಳೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಬಾರಿಯೂ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಬಹುದು. ಡಿಡಿಪಿಐ ಅವರೊಂದಿಗೆ ಈ ಕುರಿತು ಚರ್ಚಿಸುವಂತೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶರಿಗೆ ಸೂಚಿಸಿದರು.

      ಸಮಾಜದ ನಗರ ಕಾರ್ಯದರ್ಶಿ ಬಳ್ಳಾರಿ ಷಣ್ಮುಖಪ್ಪ ಮಾತನಾಡಿ, ಕನಕ ಜಯಂತಿ ಅಂಗವಾಗಿ ಜಿಲ್ಲೆಯ ಶಾಲಾ ಮಕ್ಕಳಿಗೆ ಕನಕದಾಸರ ಕುರಿತು ಅಧ್ಯಯನ ಏರ್ಪಡಿಸಬೇಕೆಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಮಕ್ಕಳಿಗೆ ಕನಕದಾಸರ ಕುರಿತು ಅಧ್ಯಯನ ಮಾಡಿಸಲು ಜಿಲ್ಲಾ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಬರುವುದಿಲ್ಲ. ರಾಜ್ಯ ಸರ್ಕಾರದಿಂದ ಆದೇಶ ಬಂದಲ್ಲಿ ಮಾಡಬಹುದು. ಈ ಕುರಿತು ನೀವು ಮನವಿ ನೀಡಿದರೆ, ಸರ್ಕಾರಕ್ಕೆ ಸಲ್ಲಸಲಾಗುವುದು ಎಂದರು.

        ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಸಮಾಜದ ಮುಖಂಡರಾದ ಮಾಜಿ ಮೇಯರ್ ಗೋಣೆಪ್ಪ, ಮಂಜುನಾಥ್ ಇಟ್ಟಿಗುಡಿ, ಹೆಚ್.ಎಂ.ಮಂಜುನಾಥ್, ಸಮಾಜದ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಹಾಲೇಕಲ್ ಅರವಿಂದ್, ಕಾರ್ಯಾಧ್ಯಕ್ಷ ಪರಶುರಾಮ್, ಕೆ.ರೇವಣಸಿದ್ದಪ್ಪ, ಬಾಡಾ ರವಿ, ಹೆಚ್.ಆರ್.ಮಧು, ಬಿ.ಲಿಂಗರಾಜು, ಕನಕ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link