ದಾವಣಗೆರೆ:
ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್ ರೂಪದಲ್ಲಿ ಜಮೆಯಾಗಿರುವ ಹಣದಲ್ಲಿ ನಡೆದಿರುವ ದುರುಪಯೋಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ನೇಮಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪಿಎಫ್, ಇಎಸ್‍ಐ ಸೌಲಭ್ಯ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಟ್ಟಡ ಕಾರ್ಮಿಕರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಉಮೇಶ್, ಎಐಟಿಯುಸಿ ನಾಯಕರಾದ ಹೆಚ್.ಕೆ.ರಾಮಚಂದ್ರಪ್ಪ, ಆನಂದರಾಜ್ ಅವರುಗಳ ನೇತೃತ್ವದಲ್ಲಿ ಜಮಾಯಿಸಿದ ಕಟ್ಟಡ ಕಾರ್ಮಿಕರು, ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಕಾರ್ಮಿಕ ನಾಯಕ ಹೆಚ್.ಕೆ.ರಾಮಚಂದ್ರಪ್ಪ, ನಮ್ಮ ಸಂಘಟನೆಯ ಹೋರಾಟದ ಫಲವಾಗಿ ಕರ್ನಾಟಜ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು, ಮನೆ ಕಟ್ಟಿಸುವ ಮಾಲೀಕರಿಂದ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಸಂಗ್ರಹಿಸುವ ಸೆಸ್ ರೂಪದಲ್ಲಿ ಮಂಡಳಿಗೆ ಕೋಟ್ಯಾಂತರ ರೂ. ಜಮೆಯಾಗಿದೆ. ಆದರೆ, ಈ ಹಣವನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸುವ ಬದಲು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆಂದು ಆರೋಪಿಸಿದರು.
ಮಂಡಳಿಯ ಪ್ರಧಾನ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಖಾಸಗಿ ಸಂಸ್ಥೆಗೆ ಕಟ್ಟಡ ಕಾರ್ಮಿಕರನ್ನು ಗುರುತಿಸಿ, ಗುರುತಿನ ಚೀಟಿ ನೀಡಲು 5.27 ಕೋಟಿಗೂ ಅಧಿಕ ಹಣ ನೀಡಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಕಟ್ಟಡ ಕಾರ್ಮಿಕರ ಶ್ರಮದ ಪಾಲಿನ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ. ಆದ್ದರಿಂದ ಈ ದುರುಪಯೋಗದ ತನಿಖೆಗಾಗಿ ತನಿಖಾಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಜಿ.ಉಮೇಶ್ ಮಾತನಾಡಿ, ಕೃತಕ ಮರಳು ಅಭಾವ ಸೃಷ್ಟಿಸಿ, ಎಂ ಸ್ಯಾಂಡ್ ಬಳಕೆಗೆ ಉತ್ತೇಜನ ನೀಡುವ ಮೂಲಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಾಗಿದೆ. ಎಂ ಸ್ಯಾಂಡ್ ಬಳಿಸಿಕೊಂಡು ಕಾರ್ಮಿಕರು ಕೆಲಸ ಮಾಡುವುದು ಕಷ್ಟಕರವಾಗಿದೆ. ಎಂಸ್ಯಾಂಡ್ ಬಳಿಸಿಕೊಂಡು ಕೆಲಸ ಮಾಡುವುದರಿಂದ ಹಲವು ಕಾರ್ಮಿಕರು ಸಣ್ಣಪುಟ್ಟ ಕಲ್ಲು ಚೂರುಗಳು ಚುಚ್ಚಿ ಗಾಯಗೊಗೊಳ್ಳುತ್ತಿದ್ದಾರೆ. ಆದ್ದರಿಂದ ಎಂಸ್ಯಾಂಡ್ ಬಳಿಕೆಗೆ ಕಡಿವಾಣ ಹಾಕಲು ಅಗತ್ಯ ಪ್ರಮಾಣದಲ್ಲಿ ನೈಸರ್ಗಿಕವಾಗಿ ದೊರೆಯುವ ಮರಳು ಸಿಗುವಂತೆ ಮಾಡಲು ಜಿಲ್ಲಾಡಳಿತ, ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ, ತಾಲೂಕು ಮಟ್ಟದಲ್ಲಿ ಮರಳು ಡಿಪೋ ಸ್ಥಾಪಿಸಿ, ಕಾರ್ಮಿಕರ ಕೈಗೆ ಕೆಲಸ ನೀಡಲು ಅವಕಾಶ ಕಲ್ಪಿಸಬೇಕು. ಸಿಮೆಂಟ್ ಕಬ್ಬಿಣ, ಪೇಂಟ್ ಇತರೆ ಸಾಮಗ್ರಿಗಳ ಬೆಲೆ ದಿನೇದಿನೇ ಗಗನಕ್ಕೇರುತ್ತಿದ್ದು, ಅದನ್ನು ನಿಯಂತ್ರಿಸಬೇಕು. ಸಂಘಟನೆಗಳು ನೋಂದಣಿ ಮಾಡಿದ ಕಾರ್ಮಿಕರ ಗುರುತಿನ ಪತ್ರ ನವೀಕರಣವಾದ ಹಿಂಬಾಕಿಯನ್ನು ಆಯಾ ಸಂಘಟನೆಗೆ ವಿತರಿಸಬೇಕು. 60 ವರ್ಷ ಪೂರೈಸಿದ ಕಾರ್ಮಿಕರಿಗೆ ತಿಂಗಳೊಳಗಾಗಿ 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಕಟ್ಟಡ ನಿರ್ಮಾಣ, ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರು ಸ್ವಾಭಾವಿಕವಾಗಿ ಅಥವಾ ಅಪಘಾತದಲ್ಲಾಗಲೀ ಸಾವನ್ನಪ್ಪಿದರೆ ಕಾರ್ಮಿಕರ ಅವಲಂಭಿತ ಕುಟುಂಬಕ್ಕೆ 10 ಲಕ್ಷ ರೂ. ಸಹಾಯಧನ ನೀಡಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಇಬ್ಬರು ಮಕ್ಕಳಿಗೆ ಮದುವೆಗೆ ಕನಿಷ್ಟ 1 ಲಕ್ಷ ರೂ. ನೀಡಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪಿಎ, ಇಎಸ್‍ಐ ಹಾಗೂ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆ, ತಾಲೂಕು ವ್ಯಾಪ್ತಿಯಲ್ಲಿ ಜಮೀನುಗಳನ್ನು ಖರೀದಿಸಿ, ನಿವೇಶನ ಮಾಡಿ, ಮನೆಗಳನ್ನು ಕಟ್ಟಿಕೊಡಬೇಕೆಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ 1ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಕಡ್ಡಾಯವಾಗಿ ಉಚಿತ ಶಿಕ್ಷಣ ನೀಡಬೇಕು. ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸಹಾಯಧನವನ್ನು ಕಾಲಮಿತಿಯಲ್ಲಿ ಪಾವತಿಸಬೇಕು. ಅಂಕ ಪಟ್ಟಿ ಬದಲಿಗೆ ಪ್ರಮಾಣಪತ್ರ ಮೇಲೆ ಸಹಾಯಧನ ನೀಡಬೇಕು. ಐಟಿಯುಸಿ ಮತ್ತು ಇತರೆ ರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳಿಗೆ ಕಡ್ಡಾಯವಾಗಿ ಮಂಡಳಿಯಲ್ಲಿ ಮಂಡಳಿ ಸದಸ್ಯತ್ವ ನೀಡಬೇಕು. ಕಾರ್ಮಿಕ ಇಲಾಖೆ ಕಾರ್ಯದರ್ಶಿಯನ್ನು ತಕ್ಷಣವೇ ವಜಾ ಮಾಡಿ, ನ್ಯಾಯಾಂಗ ತನಿಖೆಗೊಳಪಡಿಸಬೇಕು. ನರೇಗಾ ವಿಶೇಷ ನೋಂದಣಿ ಅಭಿಯಾನದಡಿ ನೈಜ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡುತ್ತಿರುವುದರಿಂದ ಸರ್ಕಾರವು ಮಂಡಳಿಗೆ ಯೋಜನೆ ವೆಚ್ಚದ ಶೇ.2ರಷ್ಟು ಸೆಸ್ ಪಾವತಿಸಬೇಕು.
ಮಂಡಳಿ ಸದಸ್ಯತ್ವ ಪ್ರತಿ ವರ್ಷ ನವೀಕರಣ ಷರತ್ತು ಬದಲಿಸಿ, 3 ವರ್ಷಕ್ಕೊಮ್ಮೆ ನವೀಕರಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾನಿರತ ಕಟ್ಟಡ ಕಾರ್ಮಿಕರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ, ಕಾರ್ಯಾಧ್ಯಕ್ಷ ಪಿ.ಕೆ.ಲಿಂಗರಾಜು, ಗೌರವಾಧ್ಯಕ್ಷ ಅಬ್ದುಲ್ ರೆಹಮಾನ್ ಸಾಬ್, ಎಸ್.ತಿಪ್ಪಣ್ಣ, ಭಜನೆ ಎಂ.ಹನುಮಂತಪ್ಪ, ಭೀಮಾರೆಡ್ಡಿ, ಎಸ್.ಮುರುಗೇಶ, ಬಿ.ದುಗ್ಗಪ್ಪ, ಪುಷ್ಪಾ, ಪೆರಿಸ್ವಾಮಿ, ಮಹಮ್ಮದ್ ರಫೀಕ್, ಪಿ.ಷಣ್ಮುಖಸ್ವಾಮಿ, ಸುರೇಶ ಯರಗುಂಟೆ, ಜಿ.ಆರ್.ನಾಗರಾಜ, ಪಿ.ಷಣ್ಮುಖಂ, ಸುರೇಶ, ಎಸ್.ಎಂ.ಸಿದ್ದಲಿಂಗಪ್ಪ, ಐರಣಿ ಚಂದ್ರು, ಸಿದ್ದಲಿಂಗಪ್ಪ, ಶಿವಕುಮಾರ ಡಿ.ಶೆಟ್ಟರ್, ಫಯಾಜ್ ಚಂದ್ರನಹಳ್ಳಿ, ಕೆ.ಎಚ್.ಹನುಮಂತಪ್ಪ, ರಮೇಶ ಗೋಶಾಲೆ, ಆರ್.ಮಣಿ, ಕುಮಾರ ಆವರಗೆರೆ, ಟಿ.ನಾಗರಾಜ, ಎಚ್.ಆರ್.ನಾಗರಾಜ, ನೇತ್ರಾವತಿ, ಕೆ.ಜಿ.ಡಿ.ಬಸವರಾಜ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
