ಬಳ್ಳಾರಿ

ಕಳೆದ ವಾರವಷ್ಟೇ ಮನೆಯ ಮುಂದೆ ಇದ್ದ 3 ವರ್ಷದ ಪೋರನನ್ನು ಹಿಡಿದು ರಕ್ತ ಹೀರಿ ಸಾಯಿಸಿದ್ದ ಚಿರತೆಯು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸೋಮಲಾಪುರ ಎಂಬ ಗ್ರಾಮದಲ್ಲಿ ಕಳೆದ ಬುಧವಾರ ಸಂಜೆ 6.30ರ ವೇಳೆಗೆ ಮನೆಯ ಮುಂದೆ ಶೌಚಕ್ಕೆಂದು ಹೋಗಿದ್ದ ಮೂರು ವರ್ಷದ ಬಾಲಕನನ್ನು ಅಲ್ಲಿಯೇ ಜಾಲಿಗಿಡದಲ್ಲಿ ಅಡಗಿ ಕುಳಿತು ಹೊಂಚು ಹಾಕಿದ್ದ ಚಿರತೆಯು ಆ ಬಾಲಕನ್ನು ಹೊತ್ತೊಯ್ದು ರಕ್ತ ಕುಡಿದಿತ್ತು. ಇದರಿಂದ ಆ ಬಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದನು. ಈ ಘಟನೆ ಮಾಸುವ ಮುನ್ನವೇ ಕಳೆದ ಮೂರು ದಿನದ ಹಿಂದೆ ಗ್ರಾಮದಲ್ಲಿ ಮತ್ತೆ ಪ್ರತ್ಯಕ್ಷವಾದ ಚಿರತೆಯನ್ನು ಕಂಡ ಬಾಲಕಿಯೊಬ್ಬಳು ಮೂರ್ಚೆ ಬಂದು ಬಿದ್ದಿದ್ದಳು. ಅಲ್ಲದೆ ಪಕ್ಕದ ಗುಡ್ಡಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.
ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂಧಿಸಿದ್ದ ಅರಣ್ಯಾಧಿಕಾರಿಗಳು ಗ್ರಾಮದ ನಾಲ್ಕು ಕಡೆಗಳಲ್ಲಿ ಬೋನುಗಳನ್ನು ಇರಿಸಿದ್ದರು. ಇಂದು ಬೆಳಗ್ಗೆ ಒಂದು ಬೋನಿಗೆ ಚಿರತೆ ಬಂದು ಸೆರೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಕೊಂಚ ಸಮಾಧಾನವೆನಿಸಿದರೂ ಇನ್ನೂ ಮೂರ್ನಾಲ್ಕು ಚಿರತೆಗಳು ಈ ಗುಡ್ಡಗಳಲ್ಲಿ ವಾಸ ಇವೆ ಎಂಬ ಮಾಹಿತಿಯಿಂದ ಗಾಬರಿಯಲ್ಲಿಯೇ ಇದ್ದಾರೆ.
ಈ ಗುಡ್ಡಗಾಡು ಪ್ರದೇಶವು ಕರಡಿಧಾಮಕ್ಕೆ ಪ್ರಸಿದ್ಧ. ರಾತ್ರಿ ವೇಳೆ ಕರಡಿಗಳ ಉಪಟಳದಿಂದ ಬೇಸತ್ತ ಜನಕ್ಕೆ ಇದೀಗ ಚಿರತೆಗಳು ನಿತ್ಯ ದರ್ಶನ ನೀಡುವ ಮೂಲಕ ಗಾಬರಿಯನ್ನುಂಟು ಮಾಡುತ್ತಿವೆ. ಯಾವ ವೇಳೆಯಲ್ಲಿ ಚಿರತೆ ದಾಳಿ ಮಾಡುತ್ತದೆಯೋ ಎಂಬ ಆತಂಕದಲ್ಲಿಯೇ ಜನ ವಾಸ ಮಾಡುತ್ತಿದ್ದಾರೆ . ಸದ್ಯಕ್ಕೆ ಒಂದು ಚಿರತೆಯನ್ನು ಹಿಡಿದ ಅರಣ್ಯಾಧಿಕಾರಿಗಳನ್ನು ಜನರು ಅಭಿನಂದಿಸಿದ್ದು, ಇನ್ನು ಬೆಟ್ಟದಲ್ಲಿರುವ ಉಳಿದ ಚಿರತೆಗಳನ್ನು ಬಂಧಿಸಿ ದೂರದ ಅರಣ್ಯ ಪ್ರದೇಶಕ್ಕೆ ಬಿಡುವಂತೆ ಒತ್ತಾಯಿಸಿದ್ದಾರೆ.
