ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸೇವೆಯಿಂದ ಅಮಾನತ್ತು

ಬೆಂಗಳೂರು

      ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಕರ್ನಾಟಕ ವಿಧಾನಸಭೆ ಸಚಿವಾಲಯ ಅಮಾನತುಗೊಳಿಸಿದೆ. 2016-17 ನೇ ಸಾಲಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳು ಹಾಗೂ ಇತರೆ ಖರ್ಚು ವೆಚ್ಚಗಳಲ್ಲಿ ಮೂರ್ತಿ ಅವರು ಅವ್ಯವಹಾರ ನಡೆಸಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

         ಆರ್ಥಿಕ ಅವ್ಯವಹಾರದ ತನಿಖೆಯನ್ನು ನಡೆಸಲು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ ಒಟ್ಟು 5 ಜನರ ತಂಡವನ್ನು ರಚಿಸಿ, ಒಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

        ಬೆಳಗಾವಿ ಅಧಿವೇಶನದಲ್ಲಿ ಭರಿಸಲಾದ ಆರ್ಥಿಕ ವೆಚ್ಚದ ನಿಯಮಾವಳಿಗಳನ್ನು ಮೂರ್ತಿಯವರು ಪಾಲಿಸಿಲ್ಲ. ಸಭಾಧ್ಯಕ್ಷರಿಗೆ ನಿಯಮಾವಳಿಗಳ ಪ್ರಕಾರ ಪ್ರಸ್ತಾವನೆಗಳನ್ನು ಸಲ್ಲಿಸಿಲ್ಲ ಹಾಗೂ ಕೆಲವು ಸಂದರ್ಭಗಳಲ್ಲಿ ವಾಸ್ತವಾಂಶಗಳನ್ನೊಳಗೊಂಡ ಮಾಹಿತಿಯನ್ನು ಸಮರ್ಪಕವಾಗಿ ನೀಡಿಲ್ಲ ಎಂಬ ಆರೋಪ ಮೂರ್ತಿ ಅವರ ಮೇಲಿದೆ.

       ನಿಯಮಗಳನ್ನು ಕಡತದಲ್ಲಿ ನಮೂದಿಸದೇ ಇರುವುದು, ಸಭಾಧ್ಯಕ್ಷರ ಗಮನಕ್ಕೆ ಬಾರದಂತೆ ಹಲವು ಪಸ್ತಾವನೆಗಳಿಗೆ ಅನುಮೋದನೆ ಪಡೆದಿರುವುದು ಕಂಡುಬಂದಿದೆ. ವಿಧಾನಸಭೆ ಕಾರ್ಯದರ್ಶಿಗಳಡಿ ಬರುವ ಸಿಬ್ಬಂದಿಗೆ ಯಾವುದೇ ಮಾರ್ಗದರ್ಶನವನ್ನು ಕಡತದಲ್ಲಿ ನೀಡದೇ ಹಾಗೂ ಅವರು ಸಲ್ಲಿಸಿರುವ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸದೇ ಟಿಪ್ಪಣಿಗಳನ್ನು ಯಥಾವತ್ತಾಗಿ ಮೂರ್ತಿ ಅವರು ಅನುಮೋದನೆ ನೀಡಿರುವುದನ್ನು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

         ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿರುವ ಜೊತೆಗೆ ಸಭಾಧ್ಯಕ್ಷರನ್ನು ತಪ್ಪು ದಾರಿಗೆ ಎಳೆದಿರುವ ಗುರುತರ ಆರೋಪ ಮೂರ್ತಿಯವರ ಮೇಲಿದೆ. ಸರ್ಕಾರಿ ನೌಕರರಾಗಿ ಅಪ್ರಮಾಣಿಕತೆ ತೋರಿರುವುದು 1996 ರ ಕರ್ನಾಟಕ ಸೇವಾ ನಿಯಮಾವಳಿ ನಿಯಮ 3ರ ರೀತ್ಯಾ ಗಂಭೀರ ಲೋಪವಾಗಿರುತ್ತದೆ. ಹೀಗಾಗಿ ಎಸ್.ಮೂರ್ತಿ ಅವರನ್ನು ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎಂ.ವಿದ್ಯಾಶ್ರೀ ಅಮಾನತು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap