ತುರುವೇಕೆರೆ
ನೀರನ್ನು ಉಳಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬರ ಹಕ್ಕು. ಅದನ್ನು ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಭಿವೃದ್ಧಿ ಎಂದರೆ ಕೇವಲ ರಸ್ತೆ ನಿರ್ಮಿಸುವುದಲ್ಲ. ಬದಲಾಗಿ ರೈತಾಪಿಗಳ ಹಿತವನ್ನು ಕಾಪಾಡುವುದು ಸಹ ಅಭಿವೃದ್ಧಿಯ ಕೆಲಸವೂ ಆಗಿದೆ ಎಂದು ಖ್ಯಾತ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪರೆಡ್ಡಿ ತಿಳಿಸಿದರು.
ರೈತ ಹಿತರಕ್ಷಣಾ ವೇದಿಕೆಯ ರೈತರ ಮನವಿ ಮೇರೆಗೆ ಸ್ಥಳ ವೀಕ್ಷಣೆಗೆ ಆಗಮಿಸಿದ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಹೆದ್ದಾರಿ ಹಾದು ಹೋಗುವ ಸ್ಥಳಗಳನ್ನು ವೀಕ್ಷಿಸಿ ತುಂಬಾ ಬೇಸರ ವ್ಯಕ್ತಪಡಿಸಿದರು. ಇಂತಹ ಹಸಿರು ವನಗಳನ್ನು ಕಡಿಯುವ ಮೂಲಕ ರೈತಾಪಿಗಳ ಬಾಳನ್ನು ಸರ್ಕಾರ ಹಾಳು ಮಾಡುತ್ತಿದೆ. ಯಾರದೋ ಉದ್ದಾರಕ್ಕಾಗಿ ನೂರಾರು ರೈತರ ಬಾಳನ್ನು ಹಾಳು ಮಾಡುವುದು ಎಷ್ಟುಸರಿ. ಸುಪ್ರೀಂಕೋರ್ಟ್ ಸಹ ನೀರಿನ ಸೆಲೆಯನ್ನು ರಕ್ಷಿಸುವ ಹಲವಾರು ತೀರ್ಪುಗಳನ್ನು ನೀಡಿದೆ. ಕೆಲವೇ ಹಣವಂತರನ್ನು ರಕ್ಷಿಸಲು ಮುಂದಾಗಿರುವ ಇಂತಹ ಕಾಮಗಾರಿಗಳನ್ನು ಮಾಡುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಬರುವುದಲ್ಲದೆ ಆಹಾರವನ್ನು ಬೇಡುವ ದಯನೀಯ ಸ್ಥಿತಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದೆ ಎಂದರು.
ಚಾಮರಾಜನಗರದಿಂದ ಜೇವರ್ಗಿಯವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ 150 ಎ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಅರಳೀಕೆರೆ ಗೇಟ್ ಮೂಲಕ ತಾವರೇಕೆರೆ ಮಾರ್ಗವಾಗಿ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಹೆದ್ದಾರಿ ನಿರ್ಮಿಸುವ ಸಲುವಾಗಿ ಸುಮಾರು 18 ಗ್ರಾಮಗಳ ಹಸಿರು ವನವನ್ನು ಹಾಳು ಮಾಡುವ ಅಗತ್ಯವಿಲ್ಲ. ಪರ್ಯಾಯ ಮಾರ್ಗವಾಗಿ ಈಗಾಗಲೇ ಪಟ್ಟಣದ ಮೂಲಕ ಹಾದು ಹೋಗಿರುವ ಉತ್ತಮ ರಸ್ತೆ ಇದೆ. ಅದನ್ನೇ ಅಗಲೀಕರಣ ಮಾಡಬಹುದು. ಶೇಕಡಾ 80 ರಷ್ಟು ಭೂಮಿ ಸರ್ಕಾರದ್ದೇ ಇದೆ. ಉಳಿದ ಶೇಕಡಾ 20 ರಷ್ಟು ಭೂಮಿ ಖಾಸಗಿಯವರಿಗೆ ಸೇರಿದೆ. ಇವರಿಗೆ ಸೂಕ್ತ ಪರಿಹಾರ ನೀಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಿದಲ್ಲಿ ಸರ್ಕಾರಕ್ಕೆ ನೂರಾರು ಕೋಟಿ ಉಳಿತಾಯವಾಗುವುದಲ್ಲದೆ, ಹಸಿರನ್ನು ಉಳಿಸಿದ ತೃಪ್ತಿಯೂ ದೊರೆಯಲಿದೆ. ಬೈಪಾಸ್ ಕಾಮಗಾರಿಯಾದಲ್ಲಿ ಹಸಿರು ವನದಂತಿರುವ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ತೆಂಗು, ಅಡಿಕೆ ಮತ್ತಿತರ ಮರಗಿಡಗಳು ಹಾಳಾಗುವುದಲ್ಲದೆ, ನೀರಿನ ಸೆಲೆಗಳು ಮುಚ್ಚಿ ಹೋಗುವವು ಎಂದು ರೈತಾಪಿಗಳು ಆತಂಕದಲ್ಲಿದ್ದಾರೆ.
ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅರಳೀಕೆರೆ ಶಿವಯ್ಯ ಮಾತನಾಡಿ ತಮ್ಮನ್ನು ಆಳಿರುವ ಜನಪ್ರತಿನಿಧಿಗಳು ರೈತರಪರ ನಿಲ್ಲದೆ ವರ್ತಕರ ಪರ ನಿಂತಿದ್ದರ ಫಲವಾಗಿ ಇಂದು ರೈತಾಪಿಗಳು ಹೋರಾಡುವ ಸ್ಥಿತಿ ಬಂದಿದೆ. ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳು ಅನ್ನದಾತರನ್ನು ಮರೆತಿರುವುದು ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದರು.
ವಕೀಲ ಚಂದ್ರಯ್ಯ ಮಾತನಾಡಿ ಈಗಾಗಲೇ ಪರ್ಯಾಯ ರಸ್ತೆಯಿಂದಾಗುವ ತೀಕ್ಷ್ಣ ಪರಿಣಾಮಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಮನವರಿಕೆ ಮಾಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಸೂಕ್ತ ದಾರಿ ಇದ್ದರೂ ಸಹ ಪರಿಸರವನ್ನು ಹಾಳು ಮಾಡಲು ಮುಂದಾಗಿರುವ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅರಳೀಕೆರೆ ಗ್ರಾಮದ ರೈತರಾದ ಶಿವನಂಜಯ್ಯ, ಬೊಮ್ಮಲಿಂಗಯ್ಯ, ರೇಣುಕಪ್ಪ, ಶಿವಲಿಂಗಪ್ಪ, ಮಹಾಲಿಂಗಪ್ಪ ,ಗುರುಲಿಂಗಯ್ಯ, ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬೊಮ್ಮಲಿಂಗಯ್ಯ, ಬಸವರಾಜು, ಕಿರಣ್, ರಾಯಸಂದ್ರ ನಿಜಾನಂದಮೂರ್ತಿ, ಹುಲಿಕೆರೆ ರಾಜಣ್ಣ, ಕೊಟ್ಟೂರನ ಕೊಟ್ಟಿಗೆ ಶ್ರೀನಿವಾಸ್, ತುರುವೇಕೆರೆ ರಮೇಶ್ ಸೇರಿದಂತೆ ಅರಳೀಕೆರೆ ಪಾಳ್ಯ, ಹುಲಿಕೆರೆ, ಬೊಮ್ಮೇನಹಳ್ಳಿ, ತಾವರೇಕೆರೆ ಸೇರಿದಂತೆ ಹಲವಾರು ರೈತಾಪಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ