ಸರ್ಕಾರವನ್ನು ತರಾಟೆ ತೆಗೆದುಕೊಂಡ:ಎಸ್.ಆರ್.ಪಾಟಿಲ್

ಬೆಳಗಾವಿ

        ಕೃಷ್ಣಾ ಕೊಳ್ಳದ 130 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳದಿದ್ದರೆ ನಮ್ಮ ಗತಿ ಗಂಗವ್ವ ಆಗುತ್ತದೆ ಎಂದು ಕಾಂಗ್ರೆಸ್‍ನ ಎಸ್.ಆರ್.ಪಾಟಿಲ್ ಸರ್ಕಾರವನ್ನು ತರಾಟೆ ತೆಗೆದುಕೊಂಡರು.

       ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹಣಮಂತ ನಿರಾಣಿ ಅವರ ಪ್ರಶ್ನೆಗೆ ಸಚಿವ ಡಿ.ಕೆ.ಶಿವಕುಮಾರ್ ಉತ್ತರಿಸುವಾಗ ಮಧ್ಯ ಪ್ರವೇಶಿಸಿದ ಎಸ್.ಆರ್.ಪಾಟೀಲ್, ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವ ನದಿ. ಈ ನದಿ ನೀರು ಬಳಕೆಯಲ್ಲಿ ಹಿಂದೇಟು ಹಾಕಿದರೆ ದೊಡ್ಡ ಅನ್ಯಾಯ ಆಗುತ್ತದೆ. ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ನೋಡಿದರೆ ನನ್ನ ಕಣ್ಣಲ್ಲಿ ನೀರು ಬರುತ್ತದೆ ಎಂದರು.
ಇದಕ್ಕೆ ಪೂರಕವಾಗಿ ಪ್ರತಿಪಕ್ಷ ಬಿಜೆಪಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಕಾವೇರಿಯೂ ನಮ್ಮದು, ಕೃಷ್ಣೆಯೂ ನಮ್ಮದು. ಕಾವೇರಿ ಸಮಸ್ಯೆ ಎದುರಾದಾಗ ಇಡೀ ಉತ್ತರ ಕರ್ನಾಟಕದ ಜನತೆ ಸ್ಪಂದಿಸುತ್ತಾರೆ. ಕೃಷ್ಣೆ ವಿಚಾರದಲ್ಲಿ ಸರ್ಕಾರ ಉದಾಸೀನತೆ ತೋರಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಸರ್ಕಾರ ನೀಡಿರುವ ಉತ್ತರ ನೋಡಿದರೆ ಸರ್ಕಾರ ಕೃಷ್ಣಾ ಕೊಳ್ಳದ ನೀರು ಬಳಕೆ ಸಂಬಂಧ ಎಷ್ಟು ನಿರ್ಲಕ್ಷ್ಯ ತಾಳಿದೆ ಎಂಬುದು ಗೊತ್ತಾಗುತ್ತದೆ. ಸಚಿವ ಶಿವಕುಮಾರ್ ಅವರಿಂದ ಇಂತಹ ಉತ್ತರವನ್ನು ನಾವು ನಿರೀಕ್ಷಿಸಿರಲಿಲ್ಲ ಎಂದು ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

      ಅಧಿಕಾರಿಗಳು ಈ ಭಾಗದಲ್ಲಿ ಕೆಲಸ ಮಾಡಲು ಬರುತ್ತಿಲ್ಲ. ಕೆಲಸ ನಿರ್ವಹಿಸಲು ಮುಂದಾಗದ ಏಳು ಮಂದಿ ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಿದ್ದೇವೆ. ಕೃಷ್ಣಾ ನದಿ ನೀರು ಸದ್ಬಳಕೆ ಸಂಬಂಧ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಸಮಸ್ಯೆ ಪರಿಹಾರಕ್ಕೆ ಚರ್ಚಿಸಬೇಕಿದೆ. ಅದಕ್ಕೆ ಪ್ರಶ್ನೋತ್ತರದ ಬದಲು ಈ ವಿಷಯವನ್ನು ಅರ್ಧಗಂಟೆ ಚರ್ಚೆಗೆ ಎತ್ತಿಕೊಳ್ಳೋಣ ಎಂದು ಜಲಸಂಪನ್ಮೂಲ ಸಚಿವರು ಹೇಳಿದಾಗ, ಸಭಾಪತಿ ಬಸವರಾಜ ಹೊರಟ್ಟಿ ಶುಕ್ರವಾರ ವಿಚಾರವನ್ನು ಕೈಗೆತ್ತಿಕೊಳ್ಳೋಣ ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link