ಚಳ್ಳಕೆರೆ
ತಾಲ್ಲೂಕಿನಾದ್ಯಂತ ಅಂಚೆ ನೌಕರರ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ಯಾವುದೇ ಕಾಗದ ಪತ್ರಗಳು ವಿಲೇವಾರಿಯಾಗದೆ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಹಾಗೇ ಉಳಿದಿವೆ. ಮುಷ್ಕರ ಹಿನ್ನೆಲೆಯಲ್ಲಿ ಯಾವ ನೌಕರರು ಸಹ ಕಾರ್ಯನಿರ್ವಹಿಸದೇ ಇರುವುದರಿಂದ ಕಾಗದ ಪತ್ರಗಳು ವಿಲೇವಾರಿಯಾಗಿಲ್ಲ.
ಕಳೆದ ಎರಡ್ಮೂರು ದಿನಗಳಿಂದ ತಮ್ಮ ಕಾಗದ ಪತ್ರಗಳ ವಿಚಾರಣೆಗೆಯ ಬಗ್ಗೆ ಸಾರ್ವಜನಿಕರು ಇಲ್ಲಿನ ಅಂಚೆ ಕಚೇರಿಗೆ ಆಗಮಿಸುತ್ತಿದ್ದು, ಅವರಿಗೂ ಸಹ ಯಾವುದೇ ರೀತಿಯ ಕಾಗದ ಪತ್ರಗಳನ್ನು ನೀಡಲು ಸಿಬ್ಬಂದಿಯೇ ಇಲ್ಲ. ಕಾರಣ, ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೂಕ್ತ ಕಾಗದ ಪತ್ರಗಳ ಮಾಹಿತಿ ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿಭಾಗಿಯ ಕಾರ್ಯದರ್ಶಿ ಮೈನಲನಹಳ್ಳಿ ನಾಗರಾಜು, ಕಮಲೇಶ್‍ಚಂದ್ರ ವೇತನ ಆಯೋಗದ ಶಿಫಾರಸ್ಸನ್ನು 1 ಜನವರಿ 2016ರಿಂದಲೇ ಜಾರಿಗೊಳಿಸಬೇಕು ಮತ್ತು ಎಲ್ಲಾ ಡಿಸ್ಚಾರ್ಜ್ ಬೆನಿಫಿಟ್ ಮತ್ತು ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡಬೇಕು, ಗ್ರಾಚೀಟ್ ಹಣವನ್ನು 1.50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು, ವಾರ್ಷಿಕ 30 ದಿನಗಳ ರಜೆಯನ್ನು ಒದಗಿಸಬೇಕು, 180 ದಿನಗಳ ರಜೆಯನ್ನು ನೌಕರ ಖಾತೆಗೆ ಜಮಾಗೊಳಿಸಬೇಕು, ಆರು ತಿಂಗಳ ಸಂಬಳ ಸಹಿತ ರಜೆಯನ್ನು ನೀಡಬೇಕು ಮುಂತಾದ ಒಟ್ಟು 10 ಬೇಡಿಕೆಗಳನ್ನು ಸಲ್ಲಿಸಿದ್ದು, ಯಾವುದೇ ಬೇಡಿಕೆಗಳ ಬಗ್ಗೆ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ.
ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹೋರಾಟವನ್ನು ಮುಂದುವರೆಸಿದ್ದು, ಶೀಘ್ರದಲ್ಲೇ ಎಲ್ಲಾ ನೌಕರರ ಅಭಿಪ್ರಾಯಗಳನ್ನು ಪಡೆದು ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ಧಾರೆ. ತಾಲ್ಲೂಕಿನ ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ತಳಕು, ನಾಯಕನಹಟ್ಟಿ, ಚಳ್ಳಕೆರೆ ಪರಶುರಾಮಪುರ, ಮೊಳಕಾಲ್ಮೂರು, ರಾಂಪುರ, ಕೊಂಡ್ಲಹಳ್ಳಿ, ಓಬಳಾಪುರ ಅಂಚೆ ಕಚೇರಿ ವ್ಯಾಪ್ತಿಯ ಕಾಗದ ಪತ್ರಗಳು ವಿಲೇವಾರಿಯಾಗದೆ ಕಚೇರಿಯಲ್ಲಿದ್ದು, ಪ್ರತಿನಿತ್ಯ ಸಾರ್ವಜನಿಕರು ತಮ್ಮ ಪತ್ರಗಳನ್ನು ತರಲು ಕಚೇರಿಗೆ ಅಲೆದಾಡುವ ಸ್ಥಿತಿ ಉಂಟಾಗಿದೆ. ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ, ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇಲಾಖೆಯ ನಿರ್ಲಕ್ಷ್ಯೆ ನೌಕರ ವರ್ಗಕ್ಕೆ ಬೇಸರ ತಂದಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
