ಅಗ್ನಿ ದುರಂತದಲ್ಲಿ ನೊಂದ ಕುಟುಂಬಗಳಿಗೆ ಶಾಸಕ ಟಿ.ರಘುಮೂರ್ತಿ ಭರವಸೆ

ಚಳ್ಳಕೆರೆ

         ಕಳೆದ ಐದು ದಿನಗಳಿಂದ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ನೊಂದ 35 ಕುಟುಂಬಗಳಿಗೆ ಶಾಸಕರ ಅನುದಾನದಲ್ಲಿ ಇಲ್ಲಿನ ಲಿಡ್ಕರ್ ಸಂಸ್ಥೆಗೆ ಮಂಜೂರಾದ ಜಾಗದಲ್ಲಿ ಸುಮಾರು 12 ಲಕ್ಷದ ಶೆಡ್‍ಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

        ಭಾನುವಾರ ಸಂಜೆ ಬಳ್ಳಾರಿ ರಸ್ತೆಯ ಸಮೀಪದಲ್ಲಿರುವ ಸರ್ಕಾರಿ ಜಾಗವನ್ನು ಈಗಾಗಲೇ ಲಿಡ್ಕರ್ ಸಂಸ್ಥೆಗೆ ಕಳೆದ ವರ್ಷವೇ ಹಸ್ತಾಂತರಿಸಿದ್ದು, ಅಲ್ಲಿ ವಸತಿ ನಿರ್ಮಿಸಿಕೊಡಲು ಈಗಾಗಲೇ ಸೂಚಿಸಲಾಗಿದೆ. ಆದರೆ, ಜ.2ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಕಳೆದ ಐದು ದಿನಗಳಿಂದ ಸುಮಾರು 100ಕ್ಕೂ ಹೆಚ್ಚು ಜನರು ಅಲ್ಲಿನ ಸರ್ಕಾರಿ ಶಾಲೆ ಪಂಪ್‍ಹೌಸ್‍ನಲ್ಲಿ ಆಶ್ರಯ ಪಡೆದಿದ್ದು, 35 ಕುಟುಂಬಗಳಿಗೆ ಈಗ ತುರ್ತಾಗಿ ಶೆಡ್ ನಿರ್ಮಿಸಬೇಕಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ನಗರಸಭೆಯ ಇಂಜಿನಿಯರ್ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್‍ಗಳು ಈಗಾಗಲೇ ಶೆಡ್ ನಿರ್ಮಾಣ ಕುರಿತಂತೆ ಸಿದ್ದತೆಗಳನ್ನು ಪೂರೈಸಿದ್ದು, ಶೆಡ್ ನಿರ್ಮಾಣ ಕಾರ್ಯ ಒಂದೆರಡು ದಿನಗಳ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು.

          ಕಳೆದ ಒಂದು ವರ್ಷದಿಂದ ಲಿಡ್ಕರ್ ಸಂಸ್ಥೆ ಇಲ್ಲಿ ವಸತಿಗಳನ್ನು ನಿರ್ಮಿಸಲು ಇನ್ನೂ ಯಾವುದೇ ರೀತಿಯ ಚಾಲನೆಯನ್ನು ಪಡೆದಿಲ್ಲ ಕಾರಣ ಲಿಡ್ಕರ್ ಸಂಸ್ಥೆಯ ಛೇರ್ಮನ್‍ರೊಂದಿಗೆ ಚರ್ಚಿಸಿ ವಸತಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಮನವಿ ಮಾಡಲಾಗುವುದು ಎಂದರು. ನಗರಸಭೆ ಈಗಾಗಲೇ ಸದರಿ ಜಾಗದಲ್ಲಿ ಹೆಚ್ಚುವರಿಯಾಗಿ ಮೂರು ಬೋರ್‍ಗಳನ್ನು ಕೊರೆಸಿದ್ದು, ನೀರು ಸಹ ಲಭ್ಯವಾಗಿದೆ. ವಿದ್ಯುತ್ ಕಂಬಗಳು ಸದರಿ ಜಾಗದಲ್ಲಿದ್ದು, ನಗರಸಭೆ ಈಗಾಗಲೇ ನೀರಿನ ಪೈಪ್ ಲೈನ್ ಕಾಮಗಾರಿಯನ್ನು ಪೂರೈಸಿದ್ದು, ಇದರಿಂದ ಶೆಡ್‍ಗಳಲ್ಲಿ ವಾಸಿಸುವವರಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯಲಿವೆ. ಈಗಾಗಲೇ ನೊಂದ ಎಲ್ಲಾ ಕುಟುಂಬಗಳಿಗೂ ಸಂಪೂರ್ಣ ಮಾಹಿತಿ ನೀಡಿ ಶೆಡ್ ನಿರ್ಮಿಸಿದ ಕೂಡಲೇ ಇಲ್ಲಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ ಎಂದರು.

        ನಗರಸಭೆಯ ಜಾಗವನ್ನು ಅಲ್ಲಿನ ಕೆಲವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿದ್ದನ್ನು ಕಂಡ ಶಾಸಕರು ಕೂಡಲೇ ತಹಶೀಲ್ದಾರ್‍ಗೆ ಸೂಚಿಸಿ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು. ನೊಂದ ಎಲ್ಲಾ ಕುಟುಂಬಗಳೂ ಇನ್ನೂ ಕೆಲವೇ ದಿನಗಳಲ್ಲಿ ಶೆಡ್‍ಗಳನ್ನು ಪಡೆಯಲಿದ್ದು, ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ನೊಂದ ಎಲ್ಲರೂ ಸಹ ತಾಲ್ಲೂಕು ಆಡಳಿತ ನೀಡುವ ಸೌಲಭ್ಯಗಳನ್ನು ಸ್ವೀಕರಿಸಿ ಸಹಕರಿಸುವಂತೆ ಮನವಿ ಮಾಡಿದರು.

        ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ನಗರಸಭಾ ಸಹಾಯಕ ಇಂಜನಿಯರ್ ಲೋಕೇಶ್, ಬೆಸ್ಕಾಂ ಅಧಿಕಾರಿಗಳು, ಗ್ರಾಮಲೆಕ್ಕಿಗ ರಾಜೇಶ್, ಪ್ರಭಾರ ಆರ್‍ಐ ಲಿಂಗೇಗೌಡ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಟಿ.ಮಲ್ಲಿಕಾರ್ಜುನ, ವೈ.ಪ್ರಕಾಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಆರ್.ಪ್ರಸನ್ನಕುಮಾರ್, ಕಂದಿಕೆರೆ ಸುರೇಶ್‍ಬಾಬು, ಟಿಎಪಿಎಂಸಿ ಅಧ್ಯಕ್ಷ ಸಿ.ವೀರಭದ್ರಬಾಬು, ಭೀಮನಕೆರೆ ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link