ಕಟ್ಟಡಗಳಿಗಿಂತ ಬದುಕು ಕಟ್ಟುವ ಕೆಲಸವಾಗಲಿ

ದಾವಣಗೆರೆ :

         ಸ್ಮಾರ್ಟ್‍ಸಿಟಿ ಯೋಜನೆಯ ಅಡಿಯಲ್ಲಿ ನಿರ್ಜೀವ ರಸ್ತೆ, ಕಟ್ಟಡಗಳನ್ನು ನಿರ್ಮಿಸುವುದಕ್ಕಿಂರ ಜೀವಂತವಾಗಿರುವ ಜನರ ಬದುಕು ಕಟ್ಟುವ ಕೆಲಸಗಳಾಗಬೇಕೆಂದು ಮಾನವ ಹಕ್ಕುಗಳ ವೇದಿಕೆಯ ಸದಸ್ಯ ಎಲ್.ಹೆಚ್.ಅರುಣಕುಮಾರ್ ಪ್ರತಿಪಾದಿಸಿದರು.ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಸ್ಲಂ ಜನಾಂದೋಲನ, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಸ್ಮಾರ್ಟ್ ಸಿಟಿ ಯೋಜನೆ ಕುರಿತು ಮಾಹಿತಿ ಹಾಗು ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ ಅನುಭವ ಹಾಗೂ ಆರ್ಥಿಕ ಕೊಡುಗೆ ಕುರಿತು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಸ್ಮಾರ್ಟ್‍ಸಿಟಿ ಯೋಜನೆ ಎಂದರೆ, ಬರೀ ರಸ್ತೆ, ಕಟ್ಟಡಗಳನ್ನು ಸುಂದರಗೊಳಿಸುವುದು ಎಂಬಂತಾಗಿದೆ. ಆದರೆ, ಜನರ ಬದುಕು ಉನ್ನತೀಕರಿಸುವ ಯಾವುದೇ ಯೋಜನೆಗಳಿಲ್ಲ. ಸ್ಮಾರ್ಟ್‍ಸಿಟಿ ಯೋಜನೆಯ ಅಡಿಯಲ್ಲಿ ಪೌರಕಾರ್ಮಿಕರು, ನಿರ್ಗತಿಕರು, ಕೊಳಗೇರಿ ನಿವಾಸಿಗಳು, ಕರ್ಮಚಾರಿಗಳು ಇತರರ ಬದುಕನ್ನು ಹಸನ ಮಾಡುವಂತಹ ಕೆಲಸಗಳು ಸಹ ನಡೆಯಬೇಕಾಗಿದೆ ಎಂದು ಹೇಳಿದರು.

          ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತ ಚುಕ್ಕಾಣಿ ಹಿಡಿಯುವ ನಾಯಕರಿಗೆ ದೂರದೃಷ್ಟಿ ಇಲ್ಲದಿರುವುದೇ ಇಂತಹ ದುರಂತಕ್ಕೆ ಕಾರಣವಾಗಿದೆ. ನಗರದ ಹೃದಯ ಭಾಗದಲ್ಲಿರುವ ಹೈಸ್ಕೂಲ್ ಮೈದಾನ ಆಟ, ಕ್ರೀಡೆ, ವಾಕ್‍ಗೆ ಜನರಿಗೆ ಅನುಕೂಲವಾಗಿತ್ತು. ಅಂತಹ ಇಂದು ತಾತ್ಕಲಿಕ ಬಸ್ ನಿಲ್ದಾಣಕ್ಕಾಗಿ ಎರಡು ವರ್ಷಗಳ ಕಾಲ ತೆಗೆದುಕೊಳ್ಳಲಾಗಿದೆ. ಆ ಎರಡು ವರ್ಷದ ನಿಗದಿತ ಸಮಯದೊಳಗೆ ಹಳೇ ಬಸ್ ನಿಲ್ದಾಣದ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

         ಯಾವುದೇ ಯೋಜನೆಗಳು ಕಾಲಮಿತಿಯೊಳಗೆ ಮುಗಿಯಬೇಕು. ಸ್ಲಂ ಜನರಿಗೆ ಮನೆ, ಶೌಚಾಲಯ, ಮಕ್ಕಳಿಗೆ ಬೇಕಾದ ಉತ್ತಮ ಶಾಲಾ ಕಟ್ಟಡ ಕಟ್ಟಿಕೊಡುವ ಕೆಲಸ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಆಗಬೇಕಾಗಿತ್ತು. ಆದರೆ, ಬರೀ ರಸ್ತೆ, ಕಟ್ಟಡಕ್ಕೆ ಮಾತ್ರ ಸೀಮಿತವಾಗಿರುವುದು ಸರಿಯಲ್ಲ ಎಂದರು.

          ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಗೌರವಾಧ್ಯಕ್ಷ ಅನೀಸ್ ಪಾಷಾ, ಸ್ಮಾರ್ಟ್ ಸಿಟಿ ಯೋಜನೆಯ ಅಭಿಯಂತರ ಗುರುಪಾದಯ್ಯ, ಎಸ್.ಎಲ್.ಆನಂದಪ್ಪ, ಪ್ರಸನ್ನಕುಮಾರ್, ಲೋಕೇಶಪ್ಪ, ಬಸವರಾಜ್, ಮಲ್ಲೇಶ್ ಕುಕ್ಕವಾಡ, ತಿಪ್ಪೇಸ್ವಾಮಿ, ಶಬೀರ್ ಸಾಬ್, ಹುಚ್ಚೆಂಗಪ್ಪ, ಮಹಮದ್ ಮೂಸೀನ್ ಮತ್ತಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap