ಬೆಂಗಳೂರು
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕೈಗೆಟುಕುವ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ರಾಜ್ಯಕ್ಕೆ 3.4 ಲಕ್ಷ ಮನೆಗಳ ನಿರ್ಮಾಣಕ್ಕೆ ಕಳೆದ ಜೂನ್ ನಲ್ಲಿ ಮಂಜೂರಾತಿ ದೊರೆತಿದ್ದು, ಈ ಪೈಕಿ 44,636 ಮನೆಗಳು ಹಂಚಿಕೆಗೆ ಸಿದ್ಧವಾಗಿವೆ.
ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯ ಮಾಹಿತಿ ಪ್ರಕಾರ, ಇನ್ನೂ 53,625 ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಆರ್ಥಿಕವಾಗಿ ದುರ್ಬಲ ಮತ್ತು ಮಧ್ಯಮ ವರ್ಗಗಳಿಗೆ 3.4 ಲಕ್ಷ ಮನೆಗಳನ್ನು ನಿರ್ಮಿಸುವ ವಿವಿಧ ಯೋಜನೆಗಳಿಗೆ ಜೂನ್ ನಲ್ಲಿ ಅನುಮೋದನೆ ನೀಡಿದ್ದು, 30 ಜಿಲ್ಲೆಗಳ ಹಲವು ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ), ಕರ್ನಾಟಕ ಹೌಸಿಂಗ್ ಬೋರ್ಡ್ (ಕೆ.ಎಚ್.ಬಿ) ಸೇರಿದಂತೆ ವಿವಿಧ ಗೃಹನಿರ್ಮಾಣ ಅಭಿವೃದ್ಧಿ ಪ್ರಾಧಿಕಾರಗಳ ಜೊತೆ ಖಾಸಗಿ ಬಿಲ್ಡರ್ ಗಳಿಂದಲೂ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರು ಮತ್ತು ತುಮಕೂರಿನಲ್ಲಿ ಖಾಸಗಿ ನಿರ್ಮಾಣಗಾರರು ಎರಡು ಮಾದರಿ ಕೈಗೆಟುಕುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಫೆಲಿಸಿಟಿ ಅಡೋಬ್ – ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅನ್ನನಹಳ್ಳಿ ಕೈಗಾರಿಕಾ ಪ್ರದೇಶ, ವಸಂತ ನರಸಾಪುರ, ತುಮಕೂರಿನಲ್ಲಿ ಸ್ವರ್ಣ ಗೃಹದ ಮೊದಲ ವಸತಿ ಸಂಕೀರ್ಣ ಯೋಜನೆ ಪೂರ್ಣಗೊಂಡಿದೆ. ಪ್ರಿ ಪ್ಯಾಬ್ರಿಕೇಶನ್ ತಂತ್ರಜ್ಞಾನ ಬಳಸಿ ಸೂರು ನಿರ್ಮಿಸಲಾಗಿದೆ.
“ಈ ಮನೆಗಳು ಕಡಿಮೆ ಆದಾಯದ ಗುಂಪುಗಳಿಗೆ 9.95 ಲಕ್ಷ ರೂ.ಗೆ ಲಭ್ಯವಿದ್ದು, ಮಧ್ಯಮ ಆದಾಯದ ಗುಂಪುಗಳಿಗೆ (ಎಂಐಜಿ) 14 ಲಕ್ಷ ರೂ ಮೌಲ್ಯದ ಮನೆಗಳಿವೆ.
ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಿಂದ ಖರೀದಿದಾರರು ಕಡಿಮೆ ಇಎಂಐ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಮನೆಗಳನ್ನು ಖರೀದಿಸಬಹುದು ಎಂದು ಫೆಲಿಸಿಟಿ ಅಡೋಬ್ ನಿರ್ದೇಶಕ ಪ್ರಣವ್ ಶರ್ಮಾ ತಿಳಿಸಿದ್ದಾರೆ.
ಕೋಲಾರ ಮತ್ತು ದೊಡ್ಡಬಳ್ಳಾಪುರದಲ್ಲಿ ಮುಂದಿನ ಯೋಜನೆ ಆರಂಭಗೊಳ್ಳಲಿದೆ. 14 ಲಕ್ಷ ರೂ ಮನೆಯಲ್ಲಿ ಕ್ಲಬ್, ಈಜುಕೊಳ, ಲಿಫ್ಟ್, ಮಕ್ಕಳ ಆಟದ ಮೈದಾನ, ಪಾರ್ಕಿಂಗ್ ಸೌಲಭ್ಯಗಳಿವೆ. ಪೂರ್ವ ಬೆಂಗಳೂರಿನ ರಾಮಮೂರ್ತಿ ನಗರದ ತಂಬುಚೆಟ್ಟಿ ಪಾಳ್ಯದಲ್ಲಿ ಇದೇ ಮಾದರಿಯ ಮನೆಗಳ ನಿರ್ಮಾಣ ಆರಂಭಗೊಂಡಿದ್ದು, ಬಿಡಿಎ ಅನುಮೋದಿಸಿದ ಈ ಯೋಜನೆಯು 4.08 ಎಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿದೆ.
ಕ್ರೆಡೈನ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಸುರೇಶ್ ಹರಿ, ” ರಾಜ್ಯದಲ್ಲಿ ರಾಷ್ಟ್ರೀಯ ಯೋಜನೆಯ ಯಶಸ್ಸಿಗೆ ತ್ವರಿತ ಅನುಮೋದನೆ ಅಗತ್ಯವಾಗಿದ್ದು, ಜತೆಗೆ ಭೂಮಿ ಮತ್ತು ನಿರ್ಮಾಣ ಸಾಮಗ್ರಿಗಳು ಕಡಿಮೆ ದರಲ್ಲಿ ದೊರೆಯುವುದು ಅತ್ಯಗತ್ಯವಾಗಿದೆ ” ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
