ಮಧುಗಿರಿ
ಮುಂದಿನ ಬಾರಿಯೂ ಮಧುಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೆ. ನನ್ನ ಜೊತೆಯಲ್ಲಿದ್ದು ನನಗೆ ಮೋಸ ಮಾಡಿದವರು ಎಂದಿಗೂ ಉದ್ದಾರವಾಗುವುದಿಲ್ಲ. ತಾಲ್ಲೂಕಿನ ಜನತೆ ಎಂದಿಗೂ ಅಪಪ್ರಚಾರಕ್ಕೆ ಕಿವಿ ಕೊಡಬಾರದು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಅವರು ಭಾನುವಾರ ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಕ್ತಿ ಅಭಿಯಾನ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ಷೇತ್ರದ ಶಾಸಕನಾಗಿ ನಾನು ಶಕ್ತಿ ಮೀರಿ ಹಲವಾರು ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿರುವುದು ನನಗೆ ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಕುಡಿಯುವ ನೀರಿಗಾಗಿ ಜನರಿಗೆ ತೊಂದರೆಯಾಗದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆ. ಕ್ಷೇತ್ರದಲ್ಲಿ ಕೆಲವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು. ಉಪ ಮುಖ್ಯಮಂತ್ರಿಗಳ ಒಳ್ಳೆಯ ತನವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕೆಲ ಘಟನೆಗಳಿಂದಾಗಿ ನನಗೆ ಸಮ್ಮಿಶ್ರ ಸರಕಾರದ ಮೇಲೆ ವಿಶ್ವಾಸವಿಲ್ಲ್ಲದಂತಾಗಿದೆ.
ಆದರೆ ಈಗಿನ ಶಾಸಕರು ಹೇಮಾವತಿ ನೀರನ್ನು ಸಿದ್ದಾಪುರ ಕೆರೆಗೆ ಭರ್ತಿ ಮಾಡಿಸುವಲ್ಲಿ ವಿಫಲವಾಗಿರುವುದರಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೂತನವಾಗಿ ಆಯ್ಕೆಯಾಗಿರುವ ಪುರಸಭಾ ಸದಸ್ಯರಿಗೆ ಮುಂದಿನ ದಿನಗಳಲ್ಲಿ ನೀರಿನ ಭೀಕರತೆಯ ಅನುಭವ ತಟ್ಟಲಿದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಜೂಜು, ಮದ್ಯ, ಮಟ್ಕಾದಂತಹ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಹೊಸದಾಗಿ ಬಂದಿರುವ ಕೆಲ ಅಧಿಕಾರಿಗಳು ಜನರಿಂದ ಲಂಚ ವಸೂಲಿಗಿಳಿದ್ದಿದ್ದು, ಎಸಿಬಿ ಬಲೆಗೆ ಬೀಳುತ್ತಿರುವುದನ್ನು ಗಮನಿಸಿದರೆ ಎಂತಹವರಿಗೂ ತಿಳಿಯುತ್ತದೆ. ಈಗಾಗಲೇ ತಾಲ್ಲೂಕಿನಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದರೂ ಸಹ ಈವರೆವಿಗೂ ಗೋಶಾಲೆಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಿಲ್ಲ ಎಂದು ಪ್ರಸ್ತುತ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಜನರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ.
ನೆರೆಯ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನ ಗಮನಿಸಿದರೆ ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಕಾರ್ಯಕರ್ತರು ಹೆಚ್ಚು ಹೆಚ್ಚಾಗಿ ಶಕ್ತಿ ಅಭಿಯಾನಕ್ಕೆ ಸೇರ್ಪಡೆಯಾಗಿ ಕೈ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್ ಮಾತನಾಡಿ, ಚರಿತ್ರೆಯನ್ನು ಸೃಷ್ಟಿಸುವಂತಹ ನಾಯಕರುಗಳು ಚುನಾವಣೆಯಲ್ಲಿ ಸೋತಿದ್ದಾರೆ. ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ದಿಯನ್ನು ಕೈಗೊಂಡಿದ್ದ ಕೆ.ಎನ್.ರಾಜಣ್ಣ ಅವರನ್ನು ಚುನಾವಣೆಯಲ್ಲಿ ಮತದಾರರು ಕೈ ಹಿಡಿಯಬೇಕಿತ್ತು. ಕೆಲ ಮೀರ್ ಸಾದಕ್ಗಳಿಂದ ಸೋಲು ಕಾಣಬೇಕಾಯಿತು. ಮುಂದಿನ ಚುನಾವಣೆಯಲ್ಲಿ ಅಂತಹವರನ್ನು ದೂರವಿಟ್ಟು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಡಾ.ಜಿ.ಪರಮೇಶ್ವರ್ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಶಕ್ತಿ ಅಭಿಯಾನ ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಬೇಕೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆ ಯಾರೂ ಕೂಡ ಅವಕಾಶ ನೀಡಬಾರದು. ಕೆ.ಎನ್.ರಾಜಣ್ಣ ಶಾಸಕರಾಗಿದ್ದಾಗ ಎಲ್ಲಾ ವರ್ಗದ ಜನರ ಪರವಾಗಿ ಕೆಲಸಗಳನ್ನು ಮಾಡಿದ್ದರು. ಅವರ ಸೋಲಿನಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿಸಿ, ಹೆಚ್ಚು ಮಂದಿ ಸದಸ್ಯರಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಲ ತಂದು ಕೊಡಬೇಕೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ