ಬರಗೂರು
ರಾಷ್ಟ್ರ ಕವಿ ಕುವೆಂಪುರವರು ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ತಿಳಿಸಿದ್ದರು. ಅಂತೆಯೆ ಕನ್ನಡ ರಾಜ್ಯೋತ್ಸವಕ್ಕಾಗಿ ಕೈ ಜೋಡಿಸಿದ ಎಲ್ಲಾ ಕನ್ನಡಾಭಿಮಾನಿಗಳ ಕೈ ಕಲ್ಪವೃಕ್ಷವಾಗಲಿ ಎಂದು ಆಶಿಸುತ್ತೇನೆ. ನಾಡಿನ ನೆಲ, ಜಲ, ಸಂಸ್ಕತಿಯನ್ನು ಕನ್ನಡಿಗರಾದ ನಾವು ಗೌರವಿಸುವುದು ಅಗತ್ಯವಾಗಿ ಆಗಬೇಕಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ.ಆರ್. ಜಯರಾಮಯ್ಯ ತಿಳಿಸಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ ಭಾನುವಾರ ಯುವ ಪಡೆಯವರು, ಲಘು ವಾಹನ ಮಾಲೀಕರು, ಚಾಲಕರು ಮತ್ತು ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಕನ್ನಡ ಧ್ವಜಸ್ತಂಭ ಆವರಣದಲ್ಲಿ ಜರುಗಿದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸುಮಾರು 70 ವರ್ಷಗಳ ಹಿಂದೆ ಹಲವಾರು ಶಿಕ್ಷಕರು ರಂಗ ಕಲೆಗಳಲ್ಲಿ ಭಾಗವಹಿಸಿ ಬರಗೂರಿನ ಇತಿಹಾಸದ ಬಗ್ಗೆ ಹಲವಾರು ಪದ್ಯಗಳನ್ನು ಬರೆದಿದ್ದರು. ಅದರಲ್ಲಿ ನಮ್ಮ ಅಣ್ಣ ಚಿಕ್ಕರಂಗಪ್ಪರವರು ಮುಖ್ಯೋಪಾಧ್ಯಾಯರಾಗಿದ್ದು, ಭಾನ ರವಿನಂದನ ಬರಗೂರು, ಹನುಮನು ಉದಿಸಿದ ಬರಗೂರು ಊರಿನಲೊಂದು ಭೋಜನ ಮಂದಿರ, ಕೇರಿ ಕೇರಿಯಲೆಲ್ಲಾ ಬಯಲಾಟ ಎಂಬ ಪದ್ಯವನ್ನು ಬರೆದಿದ್ದರು. ಅದರಲ್ಲಿ ಇತಿಹಾಸವುಳ್ಳ ಬರಗೂರನ್ನು ಬಾನಿಗೆ ಹೋಲಿಸಿ, ಅಪರೂಪದ ಪಶ್ಚಿಮ ದಿಕ್ಕಿನ ಬಾಗಿಲ ಹನುಮಂತನ ದೇವಸ್ಥಾನದ ವೈಶಿಷ್ಟ್ಯತೆ, ಗ್ರಾಮದ ಗೌಡರ ಮನೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೀಡುವ ಭೋಜನ ಶಾಲೆಯ ಬಗ್ಗೆ ಅರ್ಥಗರ್ಭಿತವಾದ ಪದ್ಯಗಳು ಗ್ರಾಮಗಳಲ್ಲಿ ಮನೆ ಮಾತಾಗಿದ್ದವು.
ಇದಷ್ಟೇ ಅಲ್ಲದೆ ಗ್ರಾಮ ದೇವತೆ ವೀರ ಅಮ್ಮಾಜಿ ದೇವತೆಯು ನೂರಾರು ವರ್ಷಗಳ ಹಿಂದೆ ಯಾತ್ರೆ ಕೈಗೊಂಡು ಬಂದಾಗ ಕಲ್ಲಳ್ಳಿಯಲ್ಲಿ ನೆಲೆಯಿಲ್ಲದೆ ಕದಿರೆಹಳ್ಳಿಗೆ ಬಂದು ಗ್ರಾಮದ ಜನರು ಕುಡಿಯಲು ನೀರು ಕೊಟ್ಟಾಗ, ಅದನ್ನು ಪಟ್ಟಣವಾಗಲೆಂದು ಹರಸಿ, ಬರಗೂರಿಗೆ ಬಂದು ನೆಲೆಸಲು ಸ್ಥಳಾವಕಾಶ ಕೊಟ್ಟಿದ್ದಕ್ಕೆ ಬರಗೂರು ಚನ್ನಪಟ್ಟಣವಾಗಲೆಂದು ಹರಸಿ ನುಡಿದಿದ್ದಳು. ಇಂದು ಬರಗೂರು ದಿಗಂತದತ್ತ ಅಭಿವೃದ್ಧಿ ಹೊಂದುವುದಕ್ಕೆ ಕಾರಣವಾಗಿದೆ. ಹಾಗಾಗಿ ಗ್ರಾಮದ ಯುವಕರು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಚೈತನ್ಯ ಹೊಂದಬೇಕೆಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಯುವ ಮುಖಂಡ ಬಿ. ಹಾಲಗುಂಡೇಗೌಡ ಮಾತನಾಡಿ, ಸಾಕಷ್ಟು ತೊಂದರೆ ಎದುರಿಸಿದ ಈ ಕಟ್ಟೆಗೆ ಇಂದು ಉತ್ತಮ ಯಶಸ್ಸು ಸಿಕ್ತಿದೆ. ಮುಂದಿನ ದಿನಗಳಲ್ಲಿ ನವೆಬರ್ ತಿಂಗಳಲ್ಲೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಂತಾಗಲಿ ಎಂದರು. ಈ ಸಂದರ್ಭದಲ್ಲಿ ಮುದ್ದುಕೃಷ್ಣೆಗೌಡ, ನಾಗಭೂಷಣ್, ಸಾಹಿತಿ ಬಿ.ಎಚ್.ಚಂದ್ರ್ರಾಚಾರ್, ರಾಘವೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬರಗೂರು ಲತೀಫ್, ಬಾಬು, ಶಿವಪ್ರಸಾದ್, ಫಕ್ರುದ್ದೀನ್, ದಯಾನಂದ್, ನರಸಿಂಹರಾಜು, ಶಾಂತರಾಜು, ಮಂಜುನಾಥ್, ರಾಮಕೃಷ್ಣ, ಬಾಲಕೃಷ್ಣ ಹಾಗೂ ಗ್ರಾಮಸ್ಥರು ಊರಿನ ಗಣ್ಯರು ಹಾಜರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಮಾಜ ಸೇವೆ ಸಲ್ಲಿಸಿದ ಬಾಳಪ್ಪ, ಭೀಮಣ್ಣ, ನಿಂಗಮ್ಮರವರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ