ನಗರದ ಎಂ.ಜಿ.ಕ್ರೀಡಾಂಗಣ ಮೇಲ್ದರ್ಜೆಗೆ: ಡಿಸಿಎಂ

ತುಮಕೂರು

           ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.
ತುಮಕೂರು ನಗರದ ಎಂ.ಜಿ.ಕ್ರೀಡಾಂಗಣದಲ್ಲಿಂದು 8.25ಕೋಟಿ ಅಂದಾಜು ಮೊತ್ತದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

           ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಮಟ್ಟದ 8 ಲೈನ್‍ವುಳ್ಳ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಅಲ್ಲದೆ ಚರಂಡಿ ವ್ಯವಸ್ಥೆ, ಕ್ರೀಡಾಂಗಣ, ಸಮತಟ್ಟು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಕ್ರೀಡಾಂಗಣಕ್ಕೆ ಪ್ರತ್ಯೇಕವಾದ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಅವರು ತಿಳಿಸಿದರು.

           ಆರ್.ಸಿ.ಸಿ.ಗ್ಯಾಲರಿ, ಮಹಿಳಾ ಹಾಸ್ಟೆಲ್, ಪುಟ್‍ಬಾಲ್ ಲಾನ್, ಜಿಮ್, 10 ಲೆನ್ ಈಜು ಕೊಳ, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಇತರೆ ಕ್ರೀಡಾ ಮೂಲಭೂತ ಸೌಕರ್ಯ ಕಲ್ಪಿಸಲು ಸ್ಮಾರ್ಟ್ ಸಿಟಿ ವತಿಯಿಂದ 53 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

         ತುಮಕೂರು ನಗರ ಕ್ರೀಡಾಂಗಣವು ಬೆಂಗಳೂರು ನಗರದಲ್ಲಿರುವ ಕ್ರೀಡಾಂಗಣಗಳಿಗೆ ಪರ್ಯಾಯವಾಗಿ ಅಭಿವೃದ್ಧಿಯಾಗಬೇಕು. ಇಲ್ಲಿನ ಪ್ರತಿಭೆಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುವಂತೆ ಆಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಆಯುಕ್ತ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಸಿಇಓ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಗೋಪಿನಾಥ್, ಕ್ರೀಡೆ, ಯುವ ಸಬಲೀಕರಣ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link