ಕುಣಿಗಲ್
ಇಂದಿನ ಶಾಸಕರು ಬಗರ್‍ಹುಕುಂ ಸಾಗುವಳಿ ಚೀಟಿ ಕೊಡುವ ವಿಚಾರವಾಗಿ ಬಾರಿ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡ ಬಿ.ಎನ್.ಜಗದೀಶ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ದನ-ಎಮ್ಮೆಗಳನ್ನ ಕಟ್ಟಿಹಾಕಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.
ಸಮಾವೇಶಗೊಂಡ ನೂರಾರು ರೈತರು ತಮ್ಮ ಮನೆಯಲ್ಲಿದ ಹಸು ಎಮ್ಮೆಗಳ ಸಮೇತ ಹುಚ್ಚಮಾಸ್ತಿಗೌಡ ವೃತ್ತದ ಮುಖಾಂತರ ತಹಸೀಲ್ದಾರ್ ಕಚೇರಿಯವರೆಗೆ ಇಲ್ಲಿನ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಅಧಿಕಾರ ಹಿಡಿದಿರುವ ಶಾಸಕ ಡಾ.ರಂಗನಾಥ್ ವಿರುದ್ಧ ಘೋಷಣೆ ಕೂಗುತ್ತಾ ಕಚೇರಿಯ ಕಂಬಗಳಿಗೆ ದನ-ಎಮ್ಮೆ ಹಸುಗಳನ್ನ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಜೆಡಿಎಸ್ ಮುಖಂಡ ಬಿ.ಎನ್.ಜಗದೀಶ್ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿ ಆಡಳಿತದಲ್ಲಿ ಇದ್ದಾರೆ. ನಮಗೆ ಪ್ರತಿಭಟನೆ ಮುಜುಗರವಾದರೂ ಅನಿವಾರ್ಯವಾಗಿದೆ. ಚುನಾವಣೆ ಪೂರ್ವದಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದಂತಹ ಶಾಸಕರಾದ ನಾಗರಾಜಯ್ಯನವರು ಬಗರ್‍ಹುಕುಂ ಮಂಜೂರಾತಿಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ನಂತರ ಬದಲಾದ ರಾಜಕೀಯದಲ್ಲಿ ಶಾಸಕರಾದ ರಂಗನಾಥ್ ಮಾದಪ್ಪನಹಳ್ಳಿ, ಸಿಂಗೋನಹಳ್ಳಿ, ದೊಡ್ಡಮಾವತ್ತೂರು, ಚಿಕ್ಕಮಾವತ್ತೂರು ಭಾಗದಲ್ಲಿ ಕಾಂಗ್ರೇಸ್‍ಗೆ ಹೆಚ್ಚು ಮತಗಳು ಬರಲಿಲ್ಲ ಎಂದು ಸುಮಾರು 1000ಕ್ಕೂ ಹೆಚ್ಚು ರೈತರಿಗೆ ಉಳುಮೆ ಚೀಟಿ ನೀಡದೆ ತಕರಾರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ನಾಗಸಂದ್ರದಲ್ಲಿ ಕೃಷಿ ಇಲಾಖೆಯಿಂದ ವಿತರಿಸಬೇಕಾದ ಮೇವಿನ ಬೀಜಗಳನ್ನು ಕೇವಲ ಕಾಂಗ್ರೆಸ್ಸಿಗರಿಗೆ ಮಾತ್ರ ವಿತರಿಸಿದ್ದರು. ಅದೇ ರೀತಿ ಮಾದಪ್ಪನಹಳ್ಳಿ ರೈತರಿಗೆ ಸಿದ್ದವಾಗಿರುವ ಉಳುಮೆ ಚೀಟಿಯನ್ನು ವಿತರಿಸುತ್ತಿಲ್ಲ. ಇಂತಹ ಕೆಟ್ಟ ರಾಜಕೀಯ ತಾಲ್ಲೂಕಿನಲ್ಲಿ ಇಂತಹ ರಾಜಕೀಯ ಇದೀಗ ಪ್ರಾರಂಭಿಸಲಾಗಿದೆ. ಇದಕ್ಕೆ ರಂಗನಾಥ್ ಅವರೇ ಮೊದಲಿಗರು ಎಂದು ವ್ಯಂಗ್ಯವಾಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಸ್ ನಾಗರಾಜ್ , ಶಾಸಕರು ಉಳುಮೆ ಚೀಟಿಯನ್ನು ವಿತರಿಸದಂತೆ ತಡೆಹಿಡಿದಿಲ್ಲ. ಕೆಲವರು ತಕರಾರು ಹಾಕಿದ್ದರು. ಅದನ್ನು ಪರಿಶೀಲಿಸಿ ತಕರಾರು ವಜಾಗೊಳಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವರಿಕೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಶಾಸಕರು ವಿಧಾನ ಸಭೆಯಿಂದ ಬಂಧ ನಂತರ ನೀಡುವುದಾಗಿ ತಿಳಿಸಿದ್ದಕ್ಕೆ ಒಪ್ಪದ ಪ್ರತಿಭಟನಾಕಾರರು ಸ್ಥಳದಲ್ಲಿ ನಿರಂತರ ಪ್ರತಿಭಟನೆ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರಿಗೆ ಉಳುಮೆ ಚೀಟಿಯ ದೃಢೀಕೃತ ಪ್ರತಿಯನ್ನು ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್‍ನಾಯಕ್ , ಮುಖಂಡ ಬೆನವಾರಶೇಷಣ್ಣ, ತಾ.ಪಂ. ಸದಸ್ಯ ಕೃಷ್ಣ, ತರೀಕೆರೆ ಪ್ರಕಾಶ್ , ಕೋಟೆ ನಾಗಣ್ಣ , ಮೋದೂರು ಸೂರಿ ,ಎಡೆಯೂರು ದೀಪು, ಅಪ್ಪುಸುರೇಶ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
