ಪಕ್ಷದ ವರಿಷ್ಠರ ಅಂಗಳದಲ್ಲಿ ಖಾತೆ ಹಂಚಿಕೆಯ ಚೆಂಡು

ಬೆಂಗಳೂರು

          ಕಾಂಗ್ರೆಸ್ ನ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಖಾತೆ ವಿವಾದ ಇತ್ಯರ್ಥ ಪಡಿಸಲು ನಗರಕ್ಕೆ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಅಂತಿಮವಾಗಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರಿಗೆ ವಹಿಸಲಾಗಿದೆ.

        ಸಚಿವರಾಗಿ ಅಧಿಕಾರ ಸ್ವೀಕರಿಸಿ ಐದು ದಿನ ಕಳೆದರೂ ಸಹ ಇನ್ನೂ ಖಾತೆ ಬಿಕ್ಕಟ್ಟು ಬಗೆಹರಿದಿಲ್ಲ. ಖಾತೆ ಖ್ಯಾತೆ ನಿವಾರಿಸಲು ವೇಣುಗೋಪಾಲ್ ಇಂದು ನಡೆಸಿದ ಸರಣಿ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್, ಕೃಷ್ಣಭೈರೇಗೌಡ, ದೇಶಪಾಂಡೆ ಮತ್ತಿತರರು ಒಂದಕ್ಕೂ ಹೆಚ್ಚು ಪ್ರಬಲ ಖಾತೆಗಳನ್ನು ಹೊಂದಿದ್ದು, ಇವುಗಳನ್ನು ಬಿಟ್ಟುಕೊಡಲು ಒಪ್ಪದೇ ಇರುವ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ವರಿಷ್ಠರ ಅಂಗಳಕ್ಕೆ ಒಯ್ಯಲಾಗಿದೆ. ಖಾತೆಗಳ ಪಟ್ಟಿಯೊಂದಿಗೆ ಕೆ.ಸಿ. ವೇಣುಗೋಪಾಲ್ ದೆಹಲಿಗೆ ತೆರಳಿದರು.

         ಕೆಲ ನೂತನ ಸಚಿವರು ತಮಗೆ ಇಂತದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿದ್ದರಿಂದ ಕೆ.ಸಿ.ವೇಣುಗೋಪಾಲ್ ಅವರಿಗೂ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜತೆ ಸಭೆ ನಡೆಸಿದರು. ಸಭೆಯಲ್ಲಿ ನೂತನ ಸಚಿವರಾದ ಎಂ.ಬಿ.ಪಾಟೀಲ್, ಎಂಟಿಬಿ ನಾಗರಾಜ್, ರಹೀಂಖಾನ್ ಭಾಗಿಯಾಗಿದ್ದರು.

        ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಧ್ಯಾಹ್ನ ದೆಹಲಿಗೆ ತೆರಳುತ್ತಿದ್ದು, ಸಾಧ್ಯವಾದರೆ ದೆಹಲಿಯಲ್ಲಿ ಕುಮಾರ ಸ್ವಾಮಿ ಜತೆ ಖಾತೆಗಳ ಕುರಿತಂತೆ ಚರ್ಚೆ ನಡೆಸಲು ಉದ್ದೇಶಿಸಿದ್ದಾರೆ.

       ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೆ.ಸಿ. ವೇಣುಗೋಪಾಲ್, ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದು, ಅಂತಿಮವಾಗಿ ಯಾರಿಗೆ ಯಾವ ಖಾತೆ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದಷ್ಟು ಬೇಗ ಖಾತೆ ಹಂಚಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

        ರಮೇಶ್ ಜಾರಕಿಹೊಳಿ ಪಕ್ಷದ ಉತ್ತಮ ನಾಯಕರಾಗಿದ್ದು, ಅವರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಅವರು ಬೆಳಗಾವಿಯ ತಮ್ಮ ಮನೆಯಲ್ಲಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.ಇದಕ್ಕೂ ಮುನ್ನ ಕುಮಾರ ಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಟಿ.ಬಿ.ನಾಗರಾಜ್, ಸಚಿವ ಸ್ಥಾನ ಸಿಗದವರಿಗೆ ಸಹಜವಾಗಿ ಅಸಮಾಧಾನ ಆಗುತ್ತದೆ. ಅಸಮಾಧಾನವಾದ ಮಾತ್ರಕ್ಕೆ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನವನ್ನು ಪಕ್ಷದ ನಾಯಕರು ಸರಿಪಡಿಸುತ್ತಾರೆ ಎಂದರು.

       ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಯಿಸಿದ ಅವರು, ತಮಗೆ ಇಂತಹದ್ದೇ ಖಾತೆ ಬೇಕು ಎಂದು ಕೇಳುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ಪುನರುಚ್ಚರಿಸಿದರು.

        ಸಚಿವ ರಹೀಂಖಾನ್ ಮಾತನಾಡಿ, ಪ್ರತಿಬಾರಿಯೂ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದು, ಅನ್ಯಾಯವನ್ನು ಸರಿಪಡಿಸುವಂತೆ ವೇಣುಗೋಪಾಲ್ ಅವರಲ್ಲಿ ಮನವಿ ಮಾಡಿದ್ದೇನೆ. ಖಾತೆ ಕುರಿತು ಯಾವುದೇ ಚರ್ಚೆ ಮಾಡಿಲ್ಲ. ತಮಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನಗೊಂಡಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap