ಕುಖ್ಯಾತ ಡಕಾಯಿತರ ಬಂಧನ

ಬೆಂಗಳೂರು

          ದೆಹಲಿಯಿಂದ ಪರಾರಿಯಾಗಿ ಗೋವಾ ಮೂಲಕ ನಗರಕ್ಕೆ ಬಂದು ವೈಟ್‍ಫೀಲ್ಡ್‍ಬಳಿ ಪೊಲೀಸ್ ಸಿಬ್ಬಂದಿಯನ್ನು ಚಾಕುವಿನಿಂದ ಚುಚ್ಚಿ ಪರಾರಿಯಾಗಲು ಯತ್ನಿಸಿದ ಬಾಂಗ್ಲಾ ಮೂಲದ ಇಬ್ಬರು ಕುಖ್ಯಾತ ಡಕಾಯಿತರ ಕಾಲಿಗೆ ಗುಂಡು ಹಾರಿಸಿ ಕೆಆರ್‍ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

          ಪೊಲೀಸರ ಗುಂಡೇಟು ತಗುಲಿರುವ ಡಕಾಯಿತರಾದ ಬಾಂಗ್ಲಾದ ಮುನೀರ್ (38), ಅಲಿಂ (27)ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಬೆನ್ನಟ್ಟಿ ಬಂಧಿಸಲು ಹೋದಾಗ ಆರೋಪಿಗಳು ನಡೆಸಿರುವ ಹಲ್ಲೆಯಿಂದ ಗಾಯಗೊಂಡಿರುವ ಕೆಆರ್ ಪುರಂ ಪೊಲೀಸ್ ಪೇದೆಗಳಾದ ಮಂಜುನಾಥ ಹಾಗೂ ಚಂದ್ರಪ್ಪ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

         ಬಾಂಗ್ಲಾದಿಂದ ಗ್ಯಾಂಗ್ ಕಟ್ಟಿಕೊಂಡು ಡಕಾಯಿತಿ ಮಾಡಲು ಬರುತ್ತಿದ್ದ ಮುನೀರ್ ಹಾಗೂ ಮಿಲನ್ ಅಮೃತಹಳ್ಳಿಯ ವೈದ್ಯರೊಬ್ಬರ ಮನೆಯಲ್ಲಿ ಢಕಾಯಿತಿ ನಡೆಸಿ 25 ಲಕ್ಷ ದೋಚಿದ್ದರು.ಅದಲ್ಲದೆ ಕಳೆದ ವರ್ಷ ಏಪ್ರಿಲ್‍ನಲ್ಲಿ ಕೆಆರ್‍ಪುರಂನ ಬ್ಯಾಂಕ್ ಮ್ಯಾನೇಜರ್ ಪಾರ್ಥಿಬನ್ ಅವರ ಮನೆಯ ಢಕಾಯಿತಿ ಮಾಡಿ ಮಗಳ ಮದುವೆಗಾಗಿ ತಂದಿಟ್ಟಿದ್ದ 1 ಕೆಜಿ ಚಿನ್ನ ಸೇರಿ 45 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಬಾಂಗ್ಲಾ ಗ್ಯಾಂಗ್ ಪತ್ತೆ

         ಇವೆರಡು ಕೃತ್ಯಗಳು ನಗರ ಪೊಲೀಸರಿಗೆ ಸವಲಾಗಿ ಪರಿಣಮಿಸಿದ್ದವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಬಾಂಗ್ಲಾದ ಢಕಾಯಿತರ ಗ್ಯಾಂಗ್ ಕೃತ್ಯ ನಡೆಸಿರುವುದು ಕಂಡು ಬಂದಿದೆ ಅವರ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಶೋಧ ನಡೆಸಲಾಗಿತ್ತು.ಗ್ಯಾಂಗ್ ಕಟ್ಟಿಕೊಂಡು ಬರುತ್ತಿದ್ದ ಆರೋಪಿಗಳು ಢಕಾಯಿತಿ ಮಾಡಿ ಬಾಂಗ್ಲಾಕ್ಕೆ ಪರಾರಿಯಾಗಿ ಅಲ್ಲಿ ಹಣವೆಲ್ಲ ಖರ್ಚಾದ ನಂತರ ಮತ್ತೆ ಭಾರತಕ್ಕೆ ಹಿಂತಿರುಗಿ ಢಕಾಯಿತಿ ಕೃತ್ಯದಲ್ಲಿ ತೊಡಗುತ್ತಿದ್ದರು.

          ದೆಹಲಿ, ಗೋವಾ, ಉತ್ತರ ಪ್ರದೇಶ, ರಾಜಸ್ತಾನ, ಇನ್ನಿತರ ಕಡೆಗಳಲ್ಲಿ ಬಾಂಗ್ಲಾದ ಸುಮಾರು 25ಕ್ಕೂ ಹೆಚ್ಚು ಗ್ಯಾಂಗ್‍ಗಳು ಢಕಾಯಿತಿಯಲ್ಲಿ ತೊಡಗಿರುವುದು ತನಿಖೆ ವೇಳೆ ಪತ್ತೆಯಾಯಿತು.ಕಳೆದ ನ. 24 ರಂದು ಮುನೀರ್ ಅವರ ಸಹೋದರ ಸ್ಪೋಕನ್ ಎಂಬಾತನಿಗೆ ಢಕಾಯಿತಿ ಕೃತ್ಯದ ಸಂಬಂಧ ಬಂಧಿಸಲು ಹೋದಾಗ ಹಲ್ಲೆ ನಡೆಸಿದ ಕಾರಣಕ್ಕೆ ದೆಹಲಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು.ಇದರಿಂದ ಹೆದರಿದ ಮುನೀರ್, ಮಿಲನ್ ಜತೆಗೂಡಿ ಗೋವಾಕ್ಕೆ ಬಂದು ಅಲ್ಲಿಂದ ವೈಟ್‍ಫೀಲ್ಡ್‍ಗೆ ಬಂದಿರುವ ಮಾಹಿತಿಯು ದೆಹಲಿ ಪೊಲೀಸರಿಂದ ಬಂದಿತು.ಅದನ್ನು ಆಧರಿಸಿ ವೈಟ್‍ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಅವರು ಕೆಆರ್ ಪುರಂ ಪೊಲೀಸ್ ಇನ್ಸ್‍ಪೆಕ್ಟರ್ ಜಯ್‍ರಾಜ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದರು.

ದೆಹಲಿಯಿಂದ ಮಾಹಿತಿ

          ತಂಡಗಳು ಕಾರ್ಯಾಚರಣೆ ಕೈಗೊಂಡು ವೈಟ್‍ಫೀಲ್ಡ್‍ನ ರೈಲ್ವೆಸ್ಟೇಷನ್ ಬಳಿ ಇವರಿಬ್ಬರು ಬರುವ ಖಚಿತ ಸುಳಿವು ಆಧರಿಸಿ ಇಮ್ಮಡಿಹಳ್ಳಿ, ಅಜ್ಜಗೊಂಡನಹಳ್ಳಿಗೆ ಹೋಗುವ ರಸ್ತೆಯಲ್ಲಿ ಇಂದು ಮುಂಜಾನೆ 5.30ರ ವೇಳೆ ಹೋಗುವುದನ್ನು ಪತ್ತೆ ಹಚ್ಚಿ ಹಿಂಬಾಲಿಸಿದರು.

        ಆರೋಪಿ ಮುನೀರ್‍ನನ್ನು ಪೊಲೀಸ್ ಪೇದೆ ಮಂಜುನಾಥ್ ಬೆನ್ನಟ್ಟಿ ಹೋದಾಗ ಅವರ ಬಲತೋಳಿಗೆ ಡ್ರಾಗರ್‍ನಿಂದ ಚುಚ್ಚಿ, ಪರಾರಿಯಾಗಲು ಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಜೈರಾಜ್ ಅವರು ಶರಣಾಗುವಂತೆ ಸೂಚಿಸಿದರೂ ಮುನೀರ್ ಓಡಿ ಹೋಗುತ್ತಿದ್ದಾಗ ಮತ್ತೊಂದು ಗುಂಡು ಹಾರಿಸಿದ್ದಾರೆ.

         ಆ ಗುಂಡು ಎಡಗಾಲು ಮಂಡಿಗೆ ತಗುಲಿ ಮುನೀರ್ ಕುಸಿದು ಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ. ಇದೇ ವೇಳೆ ಮತ್ತೊಬ್ಬ ಆರೋಪಿ ಮಿಲನ್ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಬೆನ್ನಟ್ಟಿದ ಪೇದೆ ಚಂದ್ರಪ್ಪ ಅವರ ಎಡಗಾಲು ತೊಡೆಗೆ ಚುಚ್ಚಿದ್ದು, ಗಾಳಿಯಲ್ಲಿ ಒಂದು ಗುಂಡು ಸುತ್ತು ಹಾರಿಸಿದ ಪಿಎಸ್‍ಐ ಶ್ರೀನಿವಾಸ್ ದೊಡ್ಮನಿ ಶರಣಾಗುವಂತೆ ಸೂಚಿಸಿದ್ದಾರೆ. ಅದನ್ನು ಲೆಕ್ಕಿಸದೆ ಪರಾರಿಯಾಗುತ್ತಿದ್ದ ಆತನ ಮೇಲೆ ಮತ್ತೊಂದು ಗುಂಡು ಹಾರಿಸಿದ್ದು, ಬಲಗಾಲು ಮಂಡಿಗೆ ಗಾಯಗೊಂಡು ಕುಸಿದು ಬಿದ್ದು ಆತನನ್ನು ಬಂಧಿಸಲಾಗಿದೆ.

ತಂದೆ ಅತ್ಯಾಚಾರಿ

         ಆರೋಪಿ ಮುನೀರ್ 2002ರಲ್ಲಿ ಉತ್ತರ ಪ್ರದೇಶದ ನೊಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯ ಢಕಾಯಿತಿ ಕೃತ್ಯದಲ್ಲಿ ಭಾಗಿಯಾಗಿ 7 ವರ್ಷ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಮತ್ತೆ ಕೃತ್ಯದಲ್ಲಿ ತೊಡಗಿದ್ದ. ಗೋವಾದ ಮಡಗಾಂವ್ ಹಾಗೂ ಫೋಂಡ ಠಾಣೆಗಳ ತಲಾ ಒಂದು ಸೇರಿ ಎರಡು ಢಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

          ಮಿಲನ್ ಗೋವಾದ ಫೋಂಡ ಠಾಣಾ ವ್ಯಾಪ್ತಿಯಲ್ಲಿ ಕಳೆದ ಅಕ್ಟೋಬರ್‍ನಲ್ಲಿ ಢಕಾಯಿತಿಯಲ್ಲಿ ಭಾಗಿಯಾದ ಕುಖ್ಯಾತಿಗೆ ಪಾತ್ರನಾಗಿದ್ದಾನೆ.

          ಮಿಲನ್ ತಂದೆ ಅತ್ಯಾಚಾರದಲ್ಲಿ ಭಾಗಿಯಾಗಿ ದೆಹಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆರೋಪಿಗಳನ್ನು ಗುಂಡು ಹಾರಿಸಿ ಬಂಧಿಸಿದ ಕೆಆರ್ ಪುರಂ ಪೊಲೀಸ್ ತಂಡವನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅಭಿನಂದಿಸಿದ್ದಾರೆ ಎಂದು ಅಹದ್ ತಿಳಿಸಿದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link