ಮನೆ ಸುತ್ತಮುತ್ತ ಹಸಿರು ಹೆಚ್ಚಿಸುವ ಮೂಲಕ ವಾಯು ಮಾಲಿನ್ಯ ನಿಯಂತ್ರಿಸೋಣ : ಕೆ.ಪಿ.ನಾಗೇಂದ್ರ

ದಾವಣಗೆರೆ 

        ಹಸಿರು ಕಣ್ಣಿಗೆ ಮತ್ತು ವಾತಾವರಣಕ್ಕೆ ತಂಪನ್ನೊದಗಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮನೆ, ಕಚೇರಿ ಸುತ್ತಮುತ್ತ ಗಿಡಗಳನ್ನು ನೆಡುವ ಮೂಲಕ ಹಸಿರನ್ನು ಹೆಚ್ಚಿಸಬೇಕೆಂದು ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ದಾವಣಗೆರೆ ಜಿಲ್ಲಾ ಚಾಲನಾ ತರಬೇತಿ ಶಾಲೆಯ ಅಧ್ಯಕ್ಷ ಕೆ.ಪಿ.ನಾಗೇಂದ್ರ ಕರೆ ನೀಡಿದರು.

        ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಕಚೇರಿ ಇವರ ವತಿಯಿಂದ ಇಂದು ಸಾರಿಗೆ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ನವೆಂಬರ್-2018 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

       ಹಸಿರು ಹೆಚ್ಚು ನೋಡುವುದರಿಂದ ಕಣ್ಣಿನ ಕಾಯಿಲೆಗಳು ಬರುವುದಿಲ್ಲ. ಪ್ರಕೃತಿಯನ್ನು ಉತ್ತಮವಾಗಿ ನಡೆಸಿಕೊಂಡರೆ ಒಳ್ಳೆ ಫಲ ಲಭಿಸುತ್ತದೆ. ಅದೇ ಅಭಿವೃದ್ಧಿ ಮತ್ತು ತಾಂತ್ರಿಕತೆಯ ಕಾರಣಗಳಿಗಾಗಿ ಪರಿಸರವಸನ್ನು ಮಲಿನಗೊಳಿಸುತ್ತಾ ಹೋದ ಹಾಗೆ ದುಷ್ಪರಿಣಾಮಗಳನ್ನು ಅನುಭವಿಸುತ್ತೇವೆ ಎಂದರು.

       ಅರಳೀಮರ ಅತಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಆದ್ದರಿಂದ ನಮ್ಮ ಪೂರ್ವಜರು ಹಿಂದೆ ಅರಳೀಕಟ್ಟೆ ಮೇಲೆ ಕೂರುತ್ತಿದ್ದರು. ಆದರೆ ಇಂದು ಮರಗಳನ್ನು ಕಡಿಯುವವರ ಸಂಖ್ಯೆಯೇ ಹೆಚ್ಚುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಲು ಸಮರೋಪಾದಿಯಲ್ಲಿ ಪ್ರಯತ್ನಿಸಬೇಕು. ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗೆ ತಕ್ಕ ಮಟ್ಟಿನ ಪರಿಸರವನ್ನಾದರೂ ಉಳಿಸಿ ಹೋಗಲು ಸಾಧ್ಯ.

        ನಾವು ಉಪಯೋಗಿಸುವ ವಾಹನಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ವಾಯು ಮಾಲಿನ್ಯ ತಡೆಗಟ್ಟಲು ಸಹಕರಿಸಬೇಕು. 6 ತಿಂಗಳಿಗೊಮ್ಮೆ ವಾಯುಮಾಲಿನ್ಯ ಪರೀಕ್ಷೆ ಮಾಡಿಸಿ ಪ್ರಮಾಣಪತ್ರ ಪಡೆಯಬೇಕು. ಇಲ್ಲವಾದಲ್ಲಿ ರೂ.1 ಸಾವಿರ ದಂಡ ಹಾಕಲಾಗುವುದು. ನಿಯಮಿತವಾಗಿ ಆಯಿಲ್ ಬದಲಾವಣೆ, ಸರ್ವಿಸ್ ಮಾಡಿಸಬೇಕು ಎಂದ ಅವರು ಬರುವ ಜೂನ್ ಮಾಹೆಯಲ್ಲಿ ಆರ್‍ಟಿಓ ಕಚೇರಿ ಆವರಣದಲ್ಲಿ ಹೊಂಗೆ, ಅರಳಿ, ಬೇವಿನ ಮರಗಳನ್ನು ನೆಡಿಸಬೇಕೆಂದು ಆರ್‍ಟಿಓ ಅವರಲ್ಲಿ ಮನವಿ ಮಾಡಿದರು.

          ಮೋಟಾರು ವಾಹನ ನಿರೀಕ್ಷಕ ಮೊಹ್ಮದ್ ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಉಸಿರಾಡುವ ಗಾಳಿಯಲ್ಲಿ ಸ್ವಾಭಾವಿಕವಾಗಿ ಇರಬೇಕಾದ ಪ್ರಮಾಣದಲ್ಲಿ ವಿವಿಧ ಅನಿಲ ಮಿಶ್ರಣಗಳು ಇಲ್ಲದಿದ್ದರೆ ಎಲ್ಲ ಜೀವರಾಶಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನಾವು ಸುಡುವ ಪ್ರತಿ ಇಂಧನದಿಂದಲೂ ಕೆಲವು ರಾಸಾಯನಿಕ ಬಿಡುಗಡೆಯಾಗಿ ವಾತಾವರಣಕ್ಕೆ ಸೇರುತ್ತದೆ. ಇತ್ತೀಚಿನ ದಿನಗಳಲ್ಲಿ ಮೋಟಾರು ವಾಹನ, ಕೈಗಾರಿಕೆಗಳಿಂದಾಗಿ ಬಿಡುಗಡೆಯಾಗುವ ರಾಸಾಯನಿಕಗಳು ವಿಷಾನಿಲಗಳಾಗಿ ವಾತಾವರಣ ಸೇರುತ್ತಿರುವುದು ಆಘಾತಕಾರಿಯಾಗಿದೆ. ನಮ್ಮ ರಾಜಧಾನಿ ದೆಹಲಿ ರೆಡ್ ಅಲರ್ಟ್ ನಗರವಾಗಿದೆ. ಇಲ್ಲಿಯ ಗಾಳಿ ಉಸಿರಾಡಲು ಸೂಕ್ತವಾಗಿಲ್ಲ. ಇದರಿಂದ ಅನೇಕ ಕಾಯಿಲೆಗಳು ಬರುತ್ತಿದ್ದು, ಇದು ಎಲ್ಲರಿಗೂ ಎಚ್ಚರಿಕೆ ಘಂಟೆಯಾಗಿದೆ.

          ವಾಯು ಮಾಲಿನ್ಯದ ಕುರಿತು ಎಲ್ಲರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್ ಮಾಹೆಯನ್ನು ವಾಯುಮಾಲಿನ್ಯ ಜಾಗೃತಿ ಮಾಸಾಚರಣೆ ಎಂದು ಆಚರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ‘ವಾಯು ಮಾಲಿನ್ಯದಿಂದ ಮರಣ ತಡೆಗಟ್ಟಿ-ಮಾಲಿನ್ಯ ನಿಯಂತ್ರಿಸೋಣ’ ಎಂಬ ಘೋಷಣೆಯೊಂದಿಗೆ ಮಾಸಾಚರಣೆ ಮಾಡಲಾಗುತ್ತಿದೆ. ಇದರ ಪ್ರಯುಕ್ತ ಡ್ರೈವಿಂಗ್ ಶಾಲೆಗಳು, ವಾಹನ ಚಾಲಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಲ್ಲಿ ವಾಯು ಮಾಲಿನ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು.

         ವಾಹನಗಳಿಂದುಂಟಾಗುವ ಮಾಲಿನ್ಯವನ್ನು ಕನಿಷ್ಟ ಮಟ್ಟಕ್ಕೆ ತರಲು ವಿವಿಧ ಹಂತದಲ್ಲಿ ನಿಯಾಮವಳಿಗಳನ್ನು ತರಲಾಗಿದೆ. ಭಾರತ್ ಸ್ಟೇಜ್ 1 ನಾಮ್ರ್ಸ್ ನಿಂದ ಹಿಡಿದು ಇದೀಗ ಸ್ಟೇಜ್ 4 ನಾಮ್ರ್ಸ್ ಜಾರಿಗೆ ತರಲಾಗಿದೆ. ಇದರನ್ವಯ ಮೋಟಾರು ವಾಹನ ಬಳಕೆ ಮಾಡಿದಲ್ಲಿ ವಾಯು ಮಾಲಿನ್ಯ ಕಡಿತ ಮಾಡಬಹುದು. ಹಾಗೂ ವಾಹನ ಬಳಕೆ ಕಡಿಮೆ ಮಾಡಬೇಕು. ಸಾಮೂಹಿಕವಾಗಿ ವಾಹನ ಬಳಸುವಂತಾಗಬೇಕು.

         ಬಸ್ ಮತ್ತು ರೈಲನ್ನು ಹೆಚ್ಚು ಉಪಯೋಗಿಸಬೇಕು. ವಾಹನಗಳಿಗೆ ನಿಯಮಿತವಾಗಿ ಪರೀಕ್ಷೆ ಮಾಡಿಸಿ, ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು. ಜೊತೆ ಜೊತೆಗೆ ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಲು ಯಾವೆಲ್ಲಾ ಕ್ರಮ ಕೈಗೊಳ್ಳಬಹುದೆಂದು ಎಲ್ಲರೂ ಗಂಭೀರವಾಗಿ ಚಿಂತಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ವಾಯು ಮಾಲಿನ್ಯ ದಿಂದ ಉಂಟಾಗುವ ದುಷ್ಪರಿಣಾಮ ನೀಗಿಸಿ, ಮಾಲಿನ್ಯ ನಿಯಂತ್ರಿಸೋಣವೆಂದು ಕರೆ ನೀಡಿದರು.

        ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಥಮ ದರ್ಜೆ ಸಹಾಯಕ ಎಂ ಸುರೇಶ್ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕ ಕೆ ವಾಸುದೇವ ಸ್ವಾಗತಿಸಿದರು. ಎಸ್‍ಪಿಎಸ್ ನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮೋಟಾರು ವಾಹನ ನಿರೀಕ್ಷಕರಾದ ಶಿವವಕುಮಾರ್, ಹೊಸೂರ್, ಬಸ್ ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕರಿಗಳು, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಪ್ರಥಮ ದರ್ಜೆ ಸಹಾಯಕ ವೀರಪ್ಪ ವಂದಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap