ಹುಳಿಯಾರು
ಸುಲಲಿತವಾಗಿ ಹೆರಿಗೆಯಾಗಿ ಹುಟ್ಟುವ ಮಗುವಿನ ಆರೋಗ್ಯ ಉತ್ತಮವಾಗಿರಬೇಕಾದರೆ ಗರ್ಭಿಣಿಯರಿಗೆ ಆರೋಗ್ಯದ ಜಾಗೃತಿ ಅಗತ್ಯ ಎಂದು ತಿಪಟೂರಿನ ಗೀತಾ ನರ್ಸಿಂಗ್ ಹೋಂನ ಡಾ.ಗಣೇಶ್ ಕುಮಾರ್ ಕಿವಿ ಮಾತು ಹೇಳಿದರು.
ಹುಳಿಯಾರಿನ ಕಲ್ಪತರು ಫೌಂಡೇಷನ್ ಟ್ರಸ್ಟ್ ಹಾಗೂ ತಿಪಟೂರಿನ ಗೀತಾ ನರ್ಸಿಂಗ್ ಹೋಂ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕಲ್ಪತರು ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಗರ್ಭಿಣಿ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಮಹಿಳೆಯರಲ್ಲಿ ಗರ್ಭಿಣಿ ಆಹಾರದ ತಿಳುವಳಿಕೆಯ ಕೊರತೆಯಿಂದ ಹೆರಿಗೆಯ ಸಂದರ್ಭದಲ್ಲಿ ರಕ್ತಹೀನತೆಯ ಸಮಸ್ಯೆ ಕಾಡುತ್ತದೆ. ಅಲ್ಲದೆ ಕೆಲವೊಂದು ಪ್ರಕರಣದಲ್ಲಿ ಹುಟ್ಟುವ ಮಗುವೂ ಸಹ ಅಂಗವೈಕಲ್ಯ, ತೂಕ ಕಡಿಮೆ, ರಕ್ತ ಹೀನತೆ ಅಲ್ಲದೆ ಅನಾರೋಗ್ಯ ಸಹ ಇರುತ್ತದೆ. ಹಾಗಾಗಿ ಗರ್ಭಿಣಿಯರು ಊಟದ ಬಗ್ಗೆ ಕಾಳಜಿ ಮತ್ತು ಸಮಯಪಾಲನೆ ವಹಿಸಬೇಕಿದೆ. ಬಹುಮುಖ್ಯವಾಗಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಹೇರಳವಾಗಿ ಸೇವಿಸಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ನೂರಕ್ಕೂ ಹೆಚ್ಚು ಗರ್ಭಿಣಿಯರು ತಪಾಸಣೆಗೆ ಒಳಪಟ್ಟರು. ತಪಾಸಣೆಗೆ ಒಳಪಟ್ಟ ಗರ್ಭಿಣಿಯರಿಗೆ ಉಚಿತವಾಗಿ ಕ್ಯಾಲ್ಷಿಯಂ, ಐರನ್ ಮಾತ್ರೆಗಳು ಸೇರಿದಂತೆ ವಿವಿಧ ಔಷಧಿಗಳನ್ನು ನೀಡಲಾಯಿತು. ಉಚಿತವಾಗಿ ರಕ್ತ ಪರೀಕ್ಷೆ ಮಾಡಲಾಯಿತಲ್ಲದೆ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿ ಹೇಳಲಾಯಿತು.ಶಿಬಿರದಲ್ಲಿ ಡಾ.ಗೀತಾ ನಾಗರಾಜ್, ಡಾ.ಸರ್ವರ್ ಫಾತಿಮಾ, ಡಾ.ನೇತ್ರಾವತಿ, ಡಾ.ರಿಹಾನ, ಡಾ.ಅಂಜುಮ್ ಅವರು ಭಾಗವಹಿಸಿದ್ದರು. ಹುಳಿಯಾರು ಕಲ್ಪತರು ಆಸ್ಪತ್ರೆಯ ಸಿಬ್ಬಂದಿಗಳಾದ ಮಂಜುಳಾ, ಮಮತ, ಅನಿತಾ, ಭಾರತಿ, ವಾಣಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ