ಚಳ್ಳಕೆರೆ

ರಾಜ್ಯದ ಗಂಡುಮೆಟ್ಟಿದ ನಾಡಾದ ಚಿತ್ರದುರ್ಗ ಜಿಲ್ಲೆ ಐತಿಹಾಸಿಕ ಚರಿತ್ರೆಯನ್ನು ಹೊಂದಿದ್ದು, ವೀರಮದಕರಿ ನಾಯಕ ಆಳಿದ ನಾಡು ಇದಾಗಿದ್ದು, ಇಂದು ವೀರಮದಕರಿ ನಾಯಕರ ಸಾಹಸಗಳನ್ನು ಮತ್ತು ಮಹಾನ್ ಸಾಧನೆಗಳನ್ನು 77 ಪಾಳೆಗಾರರ ಸಂತತಿ ನಾಡಿನ ಜನರಲ್ಲಿ ನಿವೇದಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ 77 ಪಾಳೇಗಾರರ ಸಂತತಿ ನೆನಪೋತ್ಸವ ಕಾರ್ಯಕ್ರಮದ ನಿಮಿತ್ತ ಅನ್ನ ನೀಡುವ ಅನ್ನದಾತರನ್ನು ಸನ್ಮಾನಿಸುವ ಕಾರ್ಯ ಮಹತ್ವವುಳ್ಳದಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಇಲ್ಲಿನ ಶಾಸಕರ ಭವನದಲ್ಲಿ ಶನಿವಾರ ಪತ್ರಕರ್ತ ಸೊಂಡೆಕೆರೆ ಶಿವಣ್ಣ ಮತ್ತು ವಾಲ್ಮೀಕಿ ಸಮುದಾಯ ಹಮ್ಮಿಕೊಂಡಿದ್ದ ಪ್ರಗತಿಪರ ಮಹಿಳಾ ಸಂಘ ಹಾಗೂ ರೈತರಿಗೆ ಅಭಿನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿಗಷ್ಟೇ ರಾಜ್ಯದ ಇತಿಹಾಸದಲ್ಲಿ ಉತ್ತಮ ಆಡಳಿತದ ಮೂಲಕ ಶೌರ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸಿದ ವೀರಮದಕರಿ ನಾಯಕರವರ ಹೆಸರನ್ನು ಶಾಶ್ವತವಾಗಿ ಜನರ ಮನದಾಳದಲ್ಲಿ ಭದ್ರವಾಗಿ ಉಳಿಯುವಂತೆ ಇಂತಹ ಕಾರ್ಯವನ್ನು ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಜೆ.ಎನ್.ಕೋಟೆಯ ಗುರುಸಿದ್ದಪ್ಪ, ತಿಪ್ಪೇಸ್ವಾಮಿ, ಚಂದ್ರಣ್ಣ, ಶಿವಲಿಂಗಪ್ಪ, ಭರಮಸಾಗರದ ಕರಿಯಮ್ಮ ಇವರನ್ನು ಶಾಸಕರು ಗೌರವಿಸಿದರು. ನಗರದ ವಿಶೇಷ ಸಾಧನೆಗಾಗಿ ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ಸ್ವಪ್ನ ವೆಂಕಟೇಶ್, ಕಾರ್ಯದರ್ಶಿ ಸೂರ್ಯಪ್ರಭ, ಸಂಘಟನಾ ಕಾರ್ಯದರ್ಶಿ ಯಶೋಧಮ್ಮ, ಮದಕರಿ ಮಹಿಳಾ ಸಂಘದ ಅಧ್ಯಕ್ಷೆ, ನಗರಸಭಾ ಸದಸ್ಯೆ ಸುಮಾಭರಮಣ್ಣ, ಕಾರ್ಯದರ್ಶಿ ತಿಪ್ಪಮ್ಮ, ರೂಪ, ವಾಸವಿ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೌಭಾಗ್ಯಮ್ಮ ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷೆ ತಿಪ್ಪಮ್ಮ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಟಿ.ಸೂರನಾಯಕ ಇವರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಹಿರಿಯ ಸಂಚಾಲಕ ಸೊಂಡೆಕೆರೆ ಶಿವಣ್ಣ, ಕಳೆದ 13 ವರ್ಷಗಳಿಂದ 77 ಪಾಳೇಗಾರರ ಸವಿ ನೆನಪಿಗಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳಲ್ಲಿ ಆತ್ಮವಿಶ್ವಾಸ ತುಂಬುವ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಿದ ವಿವಿಧ ಸಂಘಟನೆಗಳು ಹಾಗೂ ಪ್ರಮುಖ ನಾಯಕರನ್ನು ಗೌರವಿಸುವ ಕಾರ್ಯವನ್ನು ವೇದಿಕೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಾಲ್ಮೀಕಿ ಧ್ವನಿ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಜೈತುಂಬಿ, ಎಂ.ಜೆ.ರಾಘವೇಂದ್ರ, ಆರ್.ಮಂಜುಳಾ, ಟಿ.ಚಳ್ಳಕೆರೆಯಪ್ಪ, ಬಿ.ಟಿ.ರಮೇಶ್‍ಗೌಡ, ಬಿ.ತಿಪ್ಪೇಸ್ವಾಮಿ, ಸಿ.ಟಿ.ವೀರೇಶ್, ಪಿ.ತಿಪ್ಪೇಸ್ವಾಮಿ, ಜಿ.ವೀರೇಶ್, ಯಾದಲಗಟ್ಟೆ ಜಗನ್ನಾಥ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
