ಕಂಬಳ ಆಚರಣೆ ವಿವಾದ : ವಿಚಾರಣೆ ಸಂವಿಧಾನ ಪೀಠಕ್ಕೆ

ನವದೆಹಲಿ

           ಕರಾವಳಿ ಜಿಲ್ಲೆಗಳ ಕಂಬಳ ಆಚರಣೆಯನ್ನು ಕಾನೂನುಬದ್ಧಗೊಳಿಸುವ ಪ್ರಾಣಿ ಹಿಂಸೆ ತಡೆ ಕಾಯ್ದೆಯ ತಿದ್ದುಪಡಿ ವಿರೋಧಿಸಿ
ಪೇಟಾ ಸಂಘಟನೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿ ಸುಪ್ರೀಂಕೋರ್ಟ್ ಇಂದು ಆದೇಶ ಹೊರಡಿಸಿದೆ.

          ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆ ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆ– 2017 ಕಾಯ್ದೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರದ ಕ್ರಮ ಕಾನೂನುಬಾಹಿರ. ಇದು 1960 ಮೂಲ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

          ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ ಬಿ.ಲೋಕೂರ್‌ ನೇತೃತ್ವದ ಪೀಠ, ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

         ತಮಿಳುನಾಡಿನಲ್ಲಿ ಆಚರಿಸಲಾಗುವ ಜಲ್ಲಿಕಟ್ಟು ಕ್ರೀಡೆಯನ್ನು ವಿರೋಧಿಸಿ ಇದೇ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿ ಸಂವಿಧಾನ ಪೀಠದ ಮುಂದೆ ವಿಚಾರಣಾ ಹಂತದಲ್ಲಿರುವುದರಿಂದ ಈ ಅರ್ಜಿಯನ್ನು ಕೂಡ ಅದೇ ಪೀಠಕ್ಕೆ ವರ್ಗಾಯಿಸಿ ನ್ಯಾಯಪೀಠ ಆದೇಶಿಸಿತು.

       ತಮಿಳುನಾಡು ಮಾದರಿಯಲ್ಲೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತಂದು, ನಿಷೇಧಿತ ಹಾಗೂ ಅಮಾನವೀಯ ಕ್ರೀಡೆಗಳ ಪಟ್ಟಿಯಿಂದ ಕಂಬಳವನ್ನು ಹೊರಗಿಟ್ಟಿತ್ತು.

         ಕಂಬಳ ಕ್ರೀಡೆಯಲ್ಲಿ ಕೋಣಗಳನ್ನು ಹಿಂಸಿಸಲಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಆದರೆ, ಸರ್ಕಾರ, ಈ ಆರೋಪದಲ್ಲಿ ಹುರುಳಿಲ್ಲ. ತಪ್ಪು ಗ್ರಹಿಕೆಯಿಂದ ಕಂಬಳವನ್ನು ವಿರೋಧಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆಯ ನಡುವೆಯೇ ಕಂಬಳಕ್ಕೆ ಅನುಮತಿ ನೀಡಲಾಗಿದೆ. ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಪಡೆಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap